ಮದ್ಯ ನಿಷೇಧ ಆರನೇ ಗ್ಯಾರಂಟಿಯಾಗಲಿ

ಮಾನ್ಯರೇ,

ಕರ್ನಾಟಕದಲ್ಲಿ ಹಳ್ಳಿ, ನಗರ, ಪಟ್ಟಣಗಳಲ್ಲಿ ಮತ್ತೆ ಸಾವಿರ ಮದ್ಯದಂಗಡಿ? ಅಬಕಾರಿ ಇಲಾಖೆ ತಯಾರಿ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ನಿಗದಿಪಡಿಸಿರುವ ಗುರಿಯನ್ನು ಮೀರಿ  ವರಮಾನ ಸಂಗ್ರಹಕ್ಕೆ ಯೋಜನೆ- ಅಬಕಾರಿ ಸಚಿವರ ಹೇಳಿಕೆ.  ವರಮಾನ ಹೆಚ್ಚಿಸುವುದು ಸರ್ಕಾರದ ಕೆಲಸ ಒಳ್ಳೆಯದೇ. ಆದರೆ, ಅರ್ಥ ಶಾಸ್ತ್ರಜ್ಞ ಕೌಟಿಲ್ಯ ಮತ್ತು ಚಾಣಕ್ಯ ನೀತಿಯ ಪ್ರಕಾರ ಯಾವುದೇ ಕಾರಣಕ್ಕೂ ರಾಜ್ಯ ಖಜಾನೆಯನ್ನು ಅನ್ಯಮಾರ್ಗ ಅಥವಾ ದುರ್ಮಾರ್ಗದ ಮೂಲಕ ತುಂಬಬಾರದು.

ಈಗಾಗಲೇ ಯುವಕರು ಮದ್ಯ ವ್ಯಸನದಿಂದ ಹೃದಯರೋಗಗಳಿಂದ ನರಳಿ ಸತ್ತಿದ್ದಾರೆ. ಗಂಡಂದಿರ ಮದ್ಯ ವ್ಯಸನದಿಂದ ಮಹಿಳೆಯರು ವಿಧವೆಯ ರಾಗಿದ್ದಾರೆ ಮತ್ತು ಆಗುತ್ತಲಿದ್ದಾರೆ. ಮದ್ಯದಂಗಡಿಗಳನ್ನು ಹೆಚ್ಚಿಸಿ, ಕರ್ನಾ ಟಕ ರಾಜ್ಯವನ್ನು ವಿಧವೆಯರ ಕೊಂಪೆಯನ್ನಾಗಿ ಮಾರ್ಪಡಿಸಬಾರದು. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಅನ್ನಭಾಗ್ಯ ರಾಮಯ್ಯ ಎಂಬ ಹೆಸರಿದೆ. ಅಬಕಾರಿ ಸಚಿವರು ಮದ್ಯರಾಮಯ್ಯ ಎಂದು ಮಾಡಬಾರದು. 

ಖಜಾನೆ ತುಂಬಿಸಲು ಒಳ್ಳೆಯ ಮಾರ್ಗದಿಂದ ಸಂಗ್ರಹಿಸಲಿ. ಶಿಕ್ಷಣ, ಆರೋಗ್ಯ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶಾಲೆ, ಆಸ್ಪತ್ರೆ, ಕೃಷಿ ಕೇಂದ್ರಗಳನ್ನಾಗಿ ಮಾಡಬೇಕು. ಬದಲಿಯಾಗಿ ಮದ್ಯ, ಸಿಗರೇಟು, ಗುಟುಕಾ ಅಂಗಡಿಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಬಾರದು. ಈ ಒಂದು ಪರಿಕಲ್ಪನೆ ರಾಜ್ಯ ಆಳುವವರಿಗೆ ಇರಬೇಕು. 

ಗ್ಯಾರಂಟಿಯಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಗಬೇಕು. ಆ ಹಣವನ್ನು ಕಸಿದುಕೊಳ್ಳುವುದರ ಜೊತೆಗೆ ಜನರ ಶಾಂತಿ, ನೆಮ್ಮದಿ ಹಾಳಾಗಬಾರದು. ಮದ್ಯ ವ್ಯಸನದಿಂದ ಕೊಲೆ, ಸುಲಿಗೆ ದರೋಡೆ ಮುಂತಾದವುಗಳ ಪ್ರಮಾಣ ಹೆಚ್ಚಾಗುತ್ತದೆ. ಕಾರಣ ಮುಖ್ಯಮಂತ್ರಿಗಳು ಸಾವಿರ ಮದ್ಯದಂಗಡಿಗಳನ್ನು ಪ್ರಾರಂಭಿಸುವ ಬದಲು ಅವುಗಳನ್ನು ಮುಚ್ಚುವ ಕ್ರಮ ಕೈಗೊಳ್ಳಬೇಕು ಹಾಗೂ ಸಾರಾಯಿ ನಿಷೇಧಿಸಿದರಂತೂ ಸ್ವಾಗತಾರ್ಹ. ಗ್ಯಾರಂಟಿಗಳಿಂದ ಜನರ ಬಾಳು ಹಸನವಾಗುವುದಕ್ಕಿಂತ ಮದ್ಯ ನಿಷೇಧದಿಂದ ಜೀವನ ಹಸನವಾಗುತ್ತದೆ.


– ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ. 

error: Content is protected !!