ಮಾನ್ಯರೇ,
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ ಮುಂತಾದ ಯೋಜನೆಗಳಿಗೆ ಪಡಿತರ ಚೀಟಿ ಕಡ್ಡಾಯ ಮಾಡಿರುವುದರಿಂದ, ಸೆಪ್ಟೆಂಬರ್ ಒಂದರಿಂದ ಹತ್ತರವರೆಗೆ ಪಡಿತರ ಚೀಟಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.
ಆದರೆ ತಿದ್ದುಪಡಿ ಪ್ರಾರಂಭವಾದ ದಿನದಿಂದಲೂ, ಸರ್ವರ್ ಸಮಸ್ಯೆ ತುಂಬಾ ಕಾಡುತ್ತಿದೆ. ಯಾವುದೇ ಸೇವಾ ಸಿಂಧು ಕೇಂದ್ರಕ್ಕೆ ಹೋದರೂ, ಸರ್ವರ್ ಇಲ್ಲ ಸರ್ ತಡವಾಗುತ್ತೆ, ದಿನಕ್ಕೆ 2 ಅಥವಾ 3 ತಿದ್ದುಪಡಿ ಮಾಡಿದರೆ ಹೆಚ್ಚಾಯಿತು ಎನ್ನುತ್ತಾರೆ.
5-10 ನಿಮಿಷದಲ್ಲಿ ಮುಗಿಯುವಂತಹ ತಿದ್ದುಪಡಿ ಕೆಲಸ, ಸರ್ವರ್ ಸಮಸ್ಯೆಯಿಂದ ಒಂದೂವರೆಯಿಂದ ಎರಡು ಗಂಟೆಯವರೆಗೂ ಹಿಡಿಯುತ್ತದೆ. ಕೆಲವೊಮ್ಮೆ ಅದೂ ಇಲ್ಲ ಎನ್ನುತ್ತಾರೆ.
ಜನಸಾಮಾನ್ಯರು ಕೆಲಸಕ್ಕೆ ರಜೆ ಹಾಕಿ ದಿನಪೂರ್ತಿ ಸೇವಾ ಕೇಂದ್ರಗಳಲ್ಲಿಯೇ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಪಡಿತರ ತಿದ್ದುಪಡಿಗೆ ನೀಡಿರುವ ಗಡುವನ್ನು ವಿಸ್ತರಿಸುವ ಜೊತೆಗೆ ಸರ್ವರ್ ಸಮಸ್ಯೆಯನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಮುರುಗೇಶ ಡಿ., ದಾವಣಗೆರೆ.