ಗ್ರಾಮಸ್ಥರ `ಬಾರ್’ ಮುಚ್ಚಿಸುವ ಪ್ರಯತ್ನ ಎಲ್ಲ ಗ್ರಾಮಗಳಿಗೂ ಮಾದರಿ

ಮಾನ್ಯರೇ,

ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ  ಗ್ರಾಮದಲ್ಲಿದ್ದ ಸರ್ಕಾರಿ ಸ್ವಾಮ್ಯದ ಎಂಎ‌ಸ್ ಐ ಎಲ್ ಬಾರ್ ನ ಪರವಾನಗಿಯನ್ನು ರದ್ದು ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಬಾರ್‌ಗೆ ಬೀಗ ಹಾಕುವ ಮಹತ್ವದ ನಿರ್ಣಯ ತೆಗೆದುಕೊಂಡಿರುವುದು ಶ್ಲ್ಯಾಘನೀಯ.

ಈ  ರೀತಿ ಸಾರ್ವಜನಿಕರೇ ಡಿಡಿಟಿ ಡ್ರಿಂಕ್ಸ್ (ಕುಡಿತ), ಡ್ರಗ್ಸ್ (ಮಾದಕ ವಸ್ತು), ಟೊಬ್ಯಾಕೊ (ತಂಬಾಕು)  ಬೇಡವೆಂದು ನಿರ್ಧರಿಸಿ, ನಿರಾಕರಿಸಿದಾಗ ಮಾತ್ರ ಇಂತಹ ಬಾರ್‌ಗಳನ್ನು ಸರ್ವರ ಹಿತದೃಷ್ಟಿಯಿಂದ ಮುಚ್ಚಿಸಲು ಸಾಧ್ಯ. ಇಂತಹ ಕಾರ್ಯ ಪ್ರತಿ ಹಳ್ಳಿ, ನಗರಗಳಲ್ಲಿ ಆಗಬೇಕು. ಜನ ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳನ್ನು ಅರಿತು, ಕಾಯಿಲೆಗಳಿಂದ ಮುಕ್ತರಾಗಿ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕು.

ಇತ್ತೀಚಿನ ವರ್ಷಗಳಲ್ಲಿ ಸೋಮಾರಿತನದ, ದೈಹಿಕ ಶ್ರಮವಿಲ್ಲದ ಜೀವನ ಶೈಲಿ, ದುಶ್ಚಟಗಳು, ದಿಢೀರೆಂದು ಏನೆಲ್ಲಾ ಗಳಿಸಬೇಕೆಂಬ ಹಪಾಹಪಿಯಲ್ಲಿ 50, 40 ವರ್ಷದೊಳಗಿನವರೇ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಸಮಾಜಕ್ಕೆ ಕಂಟಕಕಾರಿ. ತಮ್ಮ ತಂದೆ-ತಾಯಿಗಳನ್ನು ಮತ್ತು ಮಕ್ಕಳನ್ನು ಪೋಷಿಸಬೇಕಾದ ಮಧ್ಯ ವಯಸ್ಕರು ಈ ದುಶ್ಚಟಗಳಿಂದ ಸತ್ತರೆ,  ಅವ್ಯವಸ್ಥೆಯಿಂದ  ಆ ಕುಟುಂಬ ಅನಾಥವಾಗುತ್ತದೆ.

`ಒಂದು ದೇಶವನ್ನು ಸಂಪೂರ್ಣ ನಾಶ ಮಾಡಲು ಅಣು ಬಾಂಬ್, ನ್ಯೂಕ್ಲಿಯರ್ ಮಿಸೈಲ್, ಶತ್ರು ರಾಷ್ಟ್ರ ಯಾವುದೂ ಬೇಕಿಲ್ಲ. ಆ ದೇಶದ ಯುವ ಜನತೆಯನ್ನು ದುಶ್ಚಟಗಳ ದಾಸರನ್ನಾಗಿ ಮಾಡಿದರಷ್ಟೆ ಸಾಕು. ಯುವಕರ ನಾಶದಿಂದ ಆ ನಾಡು ಅನಾಥ ಮಕ್ಕಳ, ವಿಧವೆಯರ, ಮುದುಕರ ಕೊಂಪೆಯಾಗುತ್ತದೆ’ ಎನ್ನುವ ಮಾತು ಪರಮ ಸತ್ಯ.

ಕನಿಷ್ಟ ಪಕ್ಷ ದಾವಣಗೆರೆ ಜಿಲ್ಲೆಯನ್ನಾದರೂ ಆರೋಗ್ಯಯುಕ್ತ, ದುಶ್ಚಟ ಮುಕ್ತ, ಆನಂದದ ದವನಗಿರಿ ಮಾಡೋಣವೇ….?

 – ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.  

error: Content is protected !!