21ನೇ ವಾರ್ಡ್‌ನಲ್ಲಿ 201 ಬೀದಿ ನಾಯಿಗಳು

ಮಾನ್ಯರೇ, 

ದಾವಣಗೆರೆ ಮಹಾನಗರ ಪಾಲಿಕೆಯ 21ನೇ ವಾರ್ಡ್‌ನ ಸುಮಾರು 4000 ಜನಸಂಖ್ಯೆ ಇರುವ ಬಸಾಪುರದಲ್ಲಿ 201ಕ್ಕೂ ಹೆಚ್ಚು ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದು, ರಾತ್ರಿ ಆಯಿತೆಂದರೆ ದ್ವಿಚಕ್ರ ವಾಹನದಲ್ಲಿ ಹೋಗುವ ಸವಾರರು ನಾಯಿಗಳ ದಾಳಿಯಿಂದ ಪ್ರತಿದಿನ ಸರತಿ ಸಾಲಿನಂತೆ ಕೆಳಗೆ ಬಿದ್ದು ಆಸ್ಪತ್ರೆ ಕಡೆ ಧಾವಿಸುವುದು ಸಾಮಾನ್ಯವಾಗಿದೆ.

ಚಿಕ್ಕ ಮಕ್ಕಳು, ಮಹಿಳೆಯರು, ವಯೋವೃದ್ಧರು ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದು, ದೂರದ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಚಿಕ್ಕ ಮಕ್ಕಳು ಜೀವ ಕಳೆದುಕೊಂಡಂತಹ ಪರಿಸ್ಥಿತಿ, ನಮ್ಮ ಗ್ರಾಮದಲ್ಲಿ ಬಂದ ನಂತರವೇ ಪಾಲಿಕೆ ಎಚ್ಚೆತ್ತುಕೊಳ್ಳಬಹುದೇನೋ ? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಇದು ಕೇವಲ ಒಂದು ವಾರ್ಡಿನ, ಒಂದು ಪ್ರದೇಶದ ಸಮಸ್ಯೆಯಲ್ಲ. ದಾವಣಗೆರೆ ನಗರದ ತುಂಬೆಲ್ಲಾ ಬೀದಿ ನಾಯಿಗಳದ್ದೇ ಸಾಮ್ರಾಜ್ಯವಾಗಿದ್ದು, ಪಾಲಿಕೆ ಇದಕ್ಕೆ ಸೂಕ್ತ ರೀತಿಯ ವ್ಯವಸ್ಥೆ ಅಂದರೆ ಬೀದಿ ನಾಯಿಗಳನ್ನು ಬೇರೆ ಕಡೆ ಸ್ಥಳಾಂತರಿಸುವ ಮೂಲಕ ಸಾರ್ವಜನಿಕರ ಜೀವಕ್ಕೆ ಬೆಲೆ ನೀಡಲಿ ಎಂಬುದೇ ಆರು ಲಕ್ಷಕ್ಕೂ ಹೆಚ್ಚು ದಾವಣಗೆರೆ ನಗರದ ಸಾರ್ವಜನಿಕರ ಬಯಕೆಯಾಗಿದೆ.

– ಕೆ.ಎಲ್.ಹರೀಶ್ ಬಸಾಪುರ

error: Content is protected !!