ಸಚಿವರು ಸಂವಿಧಾನದ ಹೆಸರಿನಲ್ಲಿ ಮಾತ್ರ ಪ್ರಮಾಣ ವಚನ ಸ್ವೀಕರಿಸುವುದು ಸೂಕ್ತ

ಮಾನ್ಯರೇ, 

ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಡಾ.ಜಿ.ಪರಮೇಶ್ವರ್ ಮಾತ್ರ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದು ಅತ್ಯಂತ ಯೋಗ್ಯವಾದ ನಡೆ. ಸತೀಶ್ ಜಾರಕಿಹೊಳೆಯವರು ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಇದು ಸ್ವಲ್ಪ ಮಟ್ಟಿಗೆ ಉತ್ತಮ. ಬುದ್ಧ, ಬಸವ ನಮ್ಮೊಂದಿಗಿದ್ದರು ಮತ್ತು ಅವರ ಆದರ್ಶಗಳು ಇಂದಿಗೂ ನಮ್ಮೆಲ್ಲರಿಗೆ ದಾರಿದೀಪವಾಗಿವೆ. ಆ ಆದರ್ಶಗಳ ಆಡಳಿತ ಕೊಡುವುದಾಗಿ ಪ್ರತಿಜ್ಞೆ ಮಾಡುವುದು ಖಂಡಿತ ಸೂಕ್ತ. ಆದರೆ ಇನ್ನಿತರರೆಲ್ಲರೂ ದೇವರ ಹೆಸರಿನಲ್ಲಿ, ಡಿ.ಕೆ.ಶಿವಕುಮಾರ್ ಅವರು ನೊಣವಿನ ಕೆರೆ ಗಂಗಾಧರಜ್ಜರವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಅಸಂವಿಧಾನಾತ್ಮಕ ಹಾಗೂ ಯಾವುದೇ ಸರಿಯಾದ ಪುರಾವೆಗಳಿಲ್ಲದ ಆಧಾರವಾಗುತ್ತದೆ. 

ಏಕೆಂದರೆ, ದೇವರು ಯಾರು?, ಏನು?, ಎಲ್ಲಿದ್ದಾನೆ?, ಹೇಗಿದ್ದಾನೆ? ಎಂಬ ಪುರಾವೆಗಳು, ಆಧಾರಗಳು ಇನ್ನೂ ಯಾರಿಗೂ ವೈಜ್ಞಾನಿಕವಾಗಿ ಸರಿಯಾಗಿ ದೊರಕಿಲ್ಲ. ಆದ್ದರಿಂದ ಇದು ಬಹಳ ಅಸ್ಪಷ್ಟವಾಗಿ ಮುಂದೆ ಇವರ ಆಡಳಿತಗಳೂ ಯಾವ ಸಂವಿಧಾನದ ಕಾನೂನಿಗಳಿಗೂ ಸಿಗದಂತಾಗುತ್ತದೆ. ಆದರೆ ಸಂವಿಧಾನವೆಂಬುದು `ನಾವು, ನಮ್ಮಿಂದ, ನಮಗಾಗಿ, ನಮಗೋಸ್ಕರ’ ರೂಪಿಸಿಕೊಂಡಿರುವ ಶಾಸನ. ಅದರಂತೆ ಎಲ್ಲರೂ ನಡೆದರೆ ವ್ಯಕ್ತಿಗೂ, ದೇಶಕ್ಕೂ ಒಳಿತು. ಮುಂದಾಗುವ ಸಚಿವರಾದರೂ ಇದನ್ನು ಅರಿತು ಪ್ರಮಾಣ ವಚನ ಸ್ವೀಕರಿಸಲಿ ಹಾಗೂ ಸುಪ್ರೀಂ ಕೋರ್ಟ್ ಇದನ್ನು ಕಡ್ಡಾಯಗೊಳಿಸಲಿ. ಸಂವಿಧಾನದಲ್ಲೇ ಇದಕ್ಕೆ ಸರಿಯಾದ ಸೂಕ್ತ ತಿದ್ದುಪಡಿಗಳು ಆಗಲಿ. ಸಂವಿಧಾನದಂತೆ ಪ್ರಮಾಣ ವಚನ ಸ್ವೀಕರಿಸುವುದು, ಆಡಳಿತ ನಡೆಸುವುದು ಮತ್ತು ಪ್ರಜೆಗಳಾದ ನಾವೆಲ್ಲರೂ ಈ ಆಡಳಿತದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ಮರೆಯದೆ ಪಾಲಿಸಬೇಕು. 


 ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.

error: Content is protected !!