ಶಿಕ್ಷಣ ಗುಣಮಟ್ಟ ಹೆಚ್ಚಿಸಲು ತರಗತಿಗೊಬ್ಬರು ಶಿಕ್ಷಕರು ಬೇಕು

ಮಾನ್ಯರೇ,

ದುಬಾರಿ ಶುಲ್ಕದಿಂದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವುದು ಪೋಷಕರಿಗೆ ಇಂದಿನ ದಿನಗಳಲ್ಲಿ ಕಷ್ಟವಾಗುತ್ತಿದ್ದು, ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸೋಣ ವೆಂದರೆ ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಶಿಕ್ಷಕರ ಕೊರತೆಯಾಗಿ ಮಕ್ಕಳಿಗೆ ಉತ್ತಮ ವಿದ್ಯಾ ಭ್ಯಾಸ ಸಿಗುತ್ತಿಲ್ಲ ಎಂಬ ಕೊರಗು ಪೋಷಕರದ್ದು.

ಖಾಸಗಿ ಶಾಲೆಗಳಲ್ಲಿ ತರಗತಿಯ ಪ್ರತಿಯೊಂದು ವಿಷಯಕ್ಕೆ ಒಬ್ಬ ಶಿಕ್ಷಕರನ್ನು ನೇಮಿಸುತ್ತಿದ್ದು, ಇದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಆದರೆ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸುತ್ತಿರುವುದರಿಂದ ಸರಿಯಾದ ಶಿಕ್ಷಣ ದೊರೆಯದೇ ಬಡವರ ಮಕ್ಕಳು ಬೀದಿಗೆ, ಮಧ್ಯಮ ವರ್ಗದವರ ಮಕ್ಕಳನ್ನು ಪೋಷಕರು ಸಾಲ ಸೋಲಾ ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸುವಂತಾಗಿದೆ.

ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಸರ್ಕಾರಿ ಶಾಲೆಗಳಲ್ಲಿ ತರಗತಿ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸದೇ, ಒಟ್ಟು ಶಾಲೆಯಲ್ಲಿ 10 ಮಕ್ಕಳಿದ್ದರೇ ಒಬ್ಬ ಶಿಕ್ಷಕರನ್ನು, 11ರಿಂದ 60 ಮಕ್ಕಳಿದ್ದರೆ ಇಬ್ಬರು ಶಿಕ್ಷಕರನ್ನು, 61 ಮಕ್ಕಳಿಗಿಂತ ಹೆಚ್ಚಿದ್ದರೆ ಮೂವರು ಶಿಕ್ಷಕರನ್ನು ನೇಮಿಸುತ್ತಿರುವುದರಿಂದ ಮಕ್ಕಳ ಆಧಾರದ ಮೇಲೆ ಶಿಕ್ಷಣ ನೀಡುವ ಸ್ಥಿತಿ ಸರ್ಕಾರಿ ಶಾಲೆಯಲ್ಲಿದ್ದು, ಇದರಿಂದ ಯಾವ ಮಕ್ಕಳಿಗೆ ಯಾವ ಪಾಠ ಹೇಳಿಕೊಡಲಾಗುತ್ತದೆ, ಹೇಳಿ ಕೊಡುವವರೆಗೂ ಹಾಗೂ ಕೇಳಿಸಿಕೊಳ್ಳುವವರಿಗೆ ಅರ್ಥವಾಗದ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಬದಲು ಅವುಗಳನ್ನು ಮುಚ್ಚುವ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದು ನೂತನ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕಾಗಿದೆ.

ಸರ್ಕಾರ ವಿವಿಧ ಇಲಾಖೆಗಳಿಗೆ ಸಾವಿರಾರು ಕೋಟಿ ಅನುದಾನ ನೀಡುತ್ತಿರುವಾಗ ಬಡವರ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ನೀಡಿ ತರಗತಿಗೊಬ್ಬರಂತೆ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ಬಡವರ ಮಕ್ಕಳು ಸಹ ಉತ್ತಮ ಶಿಕ್ಷಣ ಪಡೆಯಲು ಹಾಗೂ ಅವನತಿಯತ್ತ ಸಾಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಕಾರ್ಯವನ್ನು ಮಾಡುವ ಜವಾಬ್ದಾರಿ ನೂತನ ಸರ್ಕಾರದ ಮೇಲಿದೆ.


– ಕೆ.ಎಲ್.ಹರೀಶ್, ಬಸಾಪುರ.

error: Content is protected !!