ರಾಣೇಬೆನ್ನೂರು, ಅ. 6 – ನೀವು ಆರೋಗ್ಯವಾಗಿ ಇರಬೇಕೇ ಶಾಸ್ತ್ರೀಯ ಸಂಗೀತ ಆಲಿಸಿರಿ ಮತ್ತು ದೇಶೀಯ ನೃತ್ಯ ಅಭ್ಯಾಸ ಮಾಡಿ ಎಂದು ರಾಷ್ಟ್ರೀಯ ಸಮಗ್ರ ವೈದ್ಯಕೀಯ ಸಂಸ್ಥೆ (ನೀಮಾ) ಜಿಲ್ಲಾ ಕಾರ್ಯದರ್ಶಿ ಡಾ. ಶ್ರೀಕಾಂತ ವೀ. ಕಳಸದ ಹೇಳಿದರು.
ಅವರು ನಗರದ ಕರ್ನಾ ಟಕ ಸಂಘದಲ್ಲಿ ಭಾನುವಾರ 88ನೇ ವರ್ಷದ ನಾಡಹಬ್ಬದ ನಾಲ್ಕನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಸಂಗೀತದ ಮೂಲಕ ರೋಗಗಳನ್ನು ಗುಣಪಡಿಸುವ ವೈಜ್ಞಾನಿಕ ಪ್ರಯೋಗಗಳು ಯಶಸ್ವಿಯಾಗಿದ್ದು, ಭಾರತೀಯ ಸಂಗೀತ ಮನಸ್ಸಿಗೆ ಶಾಂತಿ, ನೆಮ್ಮದಿ, ಪ್ರಫುಲ್ಲತೆಯನ್ನು ಕೊಡುತ್ತದೆ. ಆದರೆ ರಕ್ತದೊತ್ತಡ ಹೆಚ್ಚಿಸುವ ಅತೀ ಕರ್ಕಶ ಧ್ವನಿಯಲ್ಲಿ ಅರಚುವ ಡಿ.ಜೆ. ಸಂಸ್ಕೃೃತಿಯಿಂದ ಹೃದಯಾಘಾತದ ಘಟನೆಗಳು ಹೆಚ್ಚುತ್ತಿವೆ. ಆದರೂ ಯುವಜನತೆ ಡಿಜೆ ಸಂಸ್ಕೃತಿಯತ್ತ ವಾಲುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀಪಾದ ಕುಲಕರ್ಣಿ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೇ ಕಾರ್ಯ ನಿರ್ವಹಿಸುವ ನಮ್ಮ ಕಾರ್ಯಕರ್ತರ ಬಗ್ಗೆ ಹೆಮ್ಮೆ ಎನಿಸುತ್ತದೆ. ಉತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಿದರೂ ಜನರನ್ನು ಕರೆತರುವಲ್ಲಿ ನಾವು ಎಡವುತ್ತಿದ್ದೇವೆಯೋ ಅಥವಾ ಜನರಿಗೆ ಇಂತಹ ಕಾರ್ಯಕ್ರಮಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆಯೋ ತಿಳಿಯುತ್ತಿಲ್ಲ ಎಂದರು. ವೇದಿಕೆಯಲ್ಲಿ ನೃತ್ಯ ಸಂಯೋಜಕಿ ಸೀತಾ ಡಿ. ಛಪ್ಪರ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಧಾರವಾಡದ ಅಭಿವ್ಯಕ್ತಿ ಕಲಾ ತಂಡದ ರಂಗಕಲಾ ವಿದುಷಿ ಶ್ರೀಮತಿ ಸೀತಾ ಡಿ. ಛಪ್ಪರ ನೃತ್ಯ ಸಂಯೋಜನೆಯಲ್ಲಿ ನಡೆಸಿಕೊಟ್ಟ ಶ್ರೀಕೃಷ್ಣ ಪಾರಿಜಾತ ನೃತ್ಯ ರೂಪಕ ಹಾಗೂ ಹರಿದಾಸ ಸಾಹಿತ್ಯಕ್ಕೆ ನೃತ್ಯ ಸಂಯೋಜಿಸಿ ನೀಡ ಲಾದ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿದವು.
ಅಭಿನಂದನ ಜೋಶಿ ನಾಡಗೀತೆ ಹಾಡಿದರು, ಶ್ರೀನಿಧಿ ಶಿರಹಟ್ಟಿ ಸ್ವಾಗತಿಸಿದರು, ಸ್ವರೂಪ ಜೋಶಿ ವಂದಿಸಿದರು, ನಾಗರಾಜ ಡಿ. ಜೋಶಿ ಕಾರ್ಯಕ್ರಮ ನಿರ್ವಹಿಸಿದರು.