ಶತಮಾನದ ಸಂಭ್ರಮದಲ್ಲಿ ರಾಣೇಬೆನ್ನೂರು ಬಸವೇಶ್ವರ ಬ್ಯಾಂಕ್

ಶತಮಾನದ ಸಂಭ್ರಮದಲ್ಲಿ ರಾಣೇಬೆನ್ನೂರು ಬಸವೇಶ್ವರ ಬ್ಯಾಂಕ್

ಅಂದಿನ ಜಿಲ್ಲಾ ಸಹಕಾರಿ ಸಂಘಟಕ ಪುಟ್ಟರಾಜ ಒಡೆಯರ ಆಣತಿಯಂತೆ ನಗರದ ಕೊಟ್ರಬಸಪ್ಪ ಬಣಗಾರ ಹಾಗೂ ಹನ್ನೆರಡು  ಸಮಾನ ಮನಸ್ಕ ಪ್ರಮುಖರು  ಜೊತೆಗೂಡಿ ಐದು ಸಾವಿರ ರೂ.ಗಳ ಬಂಡವಾಳದೊಂದಿಗೆ 1924 ರಲ್ಲಿ ಪ್ರಾರಂಭಿಸಲಾದ  ರಾಣೇಬೆನ್ನೂರಿನ ಬಸವೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್ ಇದೀಗ ಶತಮಾನದ ಅಂಚಿನಲ್ಲಿದ್ದು ಇಂದು (24ರಂದು) ಸಂಭ್ರಮಾಚರಣೆಗೆ ಸಜ್ಜಾಗಿದೆ.

ಹುಟ್ಟಿನಿಂದಲೂ ದೊಡ್ಡಪೇಟೆಯಲ್ಲಿ ಕಾರ್ಯನಿರ್ವಹಿಸಿದ ಬ್ಯಾಂಕ್ ಮೂರೂವರೆ ದಶಕಗಳ ನಂತರ ಕಾಟನ್ ಮಾರ್ಕೆಟ್ ರಸ್ತೆಯಲ್ಲಿ 1961 ರಲ್ಲಿ ಕಟ್ಟಡದ ಶಂಕುಸ್ಥಾಪನೆ ನಡೆದು, 1963 ರಲ್ಲಿ ಉದ್ಘಾಟನೆಯಾಗಿದೆ. ಬ್ಯಾಂಕ್ ಸ್ವಂತ ಕಟ್ಟಡ ಹೊಂದಲು  ಸಿದ್ದಪ್ಪ ಬಣಗಾರ, ಸದಾಶಿವಯ್ಯ ಷಡಕ್ಷರಿಮಠ, ಸಿ.ಎಸ್. ಕುರವತ್ತಿ, ಚನ್ನಬಸಪ್ಪ ಪಟ್ಟಣಶೆಟ್ಟಿ, ಈಶ್ವರಪ್ಪ ಉಪ್ಪಿನ ಅವರುಗಳು ಶ್ರಮಿಸಿದರು.

ಇತ್ತೀಚಿನ  ಮೂರು ದಶಕಗಳ ಅಂತರದಲ್ಲಿ   ಬ್ಯಾಂಕಿಗೆ ಸುವರ್ಣಯುಗ ಆರಂಭವಾಗಿದ್ದು, ಅಧ್ಯಕ್ಷರಾಗಿದ್ದ ಎಂ.ಎಚ್. ಗೌಳಿ ಅವರ ಶ್ರಮದ ಪಾಲು ಅಪಾರವಾಗಿದೆ. 

ಅಸುಂಡಿ ಅಂದಾನೆಪ್ಪ , ಕಟ್ಟಿಮನಿ ಶಿವಮೂರ್ತೆಪ್ಪ, ಆಲೂರ ಬಸವರಾಜಪ್ಪ, ಬೇತೂರ ಮಹಾಲಿಂಗಪ್ಪ, ನರಸಗೊಂಡರ ಗೂಳಪ್ಪ, ವಿ.ಸಿ.ಜಂಬಗಿ ಅವರು  ತಮ್ಮ ಅಧಿಕಾರಾವಧಿಯಲ್ಲಿ  ಶ್ರಮಿಸಿದವರು. 

  ಬ್ಯಾಂಕಿನ ಕಾರ್ಯಕಲಾಪದ ವಿಸ್ತರಣೆ ತಕ್ಕ ಕಟ್ಟಡದ ಅವಶ್ಯಕತೆ ಇದೆ ಎಂದ ಅಧ್ಯಕ್ಷ ಪರಮೇಶ್‌ ಗೌಳಿ ಆಡಳಿತ ಮಂಡಳಿ 2010 ರಲ್ಲಿ ಈಗಿರುವ ಕಟ್ಟಡದ ಶಂಕುಸ್ಥಾಪನೆ ಮಾಡಿಸಿ, 2011ರಲ್ಲಿ ಹೊನ್ನಾಳಿ ಒಡೆಯರ ಚಂದ್ರ ಶೇಖರ ಶ್ರೀಗಳಿಂದ  ಉದ್ಘಾಟಿಸಲಾಯಿತು. ಈಗ ಮೂರನೇ ಬಾರಿಗೆ ಅಧ್ಯಕ್ಷರಾಗಿರುವ ಸಿ.ಆರ್. ಅಸುಂಡಿ ಅವರ ನೇತೃತ್ವದ ಶಿವಾನಂದ ಸಾಲಗೇರಿ, ಮಂಜುನಾಥ ಓಲೇಕಾರ, ಚೋಳಪ್ಪ ಕಸವಾಳ, ಪರಮೇಶ ಗೌಳಿ, ರಾಜಣ್ಣ ಮೋಟಗಿ, ಬಸವರಾಜ ತಾವರಗೊಂದಿ, ಶಂಭುಲಿಂಗ ಕಟಗಿಹಳ್ಳಿ, ಈಶ್ವರ ಹಾವನೂರ ಶಿವಕುಮಾರ ನರಸಗೊಂಡರ ಸೇರಿದಂತೆ ಈಗಿನ ಆಡಳಿತ ಮಂಡಳಿ ಶತಮಾನದ  ಸಂಭ್ರಮಾಚರಣೆಯಲ್ಲಿ ತೊಡಗಿದೆ.

ಬ್ಯಾಂಕ್ ಪ್ರಸಕ್ತ ವರ್ಷ 843 ಕೋಟಿ 87 ಲಕ್ಷ ವಹಿವಾಟು ನಡೆಸಿದ್ದು,  40 ಕೋಟಿಯಷ್ಟು ಸಾಲ ನೀಡಿ, 46 ಕೋಟಿಯಷ್ಟು ಠೇವಣಿಯೊಂದಿಗೆ 1ಕೋಟಿ 49 ಲಕ್ಷ ಲಾಭ ಗಳಿಸಿದೆ. ಎಟಿಎಂ, ರುಪೇ ಕಾರ್ಡ್, ಇ ಕಾಮರ್ಸ್, ಪಿಓಎಸ್,ಯುಪಿಐ, ಮೊಬೈಲ್ ಬ್ಯಾಂಕಿಂಗ್ ಮತ್ತು ಆರ್ ಟಿ ಜಿ ಎಸ್ ಈ ಎಲ್ಲ ಸೌಲಭ್ಯಗಳನ್ನು ಒದಗಿಸುವ  ಹಾವೇರಿ ಜಿಲ್ಲೆಯ ಮೊದಲ ಬ್ಯಾಂಕ್ ಇದಾಗಿದೆ ಎನ್ನುವ ಹೆಗ್ಗಳಿಕೆ.

– ಮನೋಹರ ಮಲ್ಲಾಡದ

error: Content is protected !!