ರಾಣೇಬೆನ್ನೂರು, ಜೂ. 6- ಮೊನ್ನೆ ನಡೆದ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ತಾಲ್ಲೂಕಿನ ತುಂಗಭದ್ರಾ ನದಿ ತೀರದಲ್ಲಿ ಹಟ್ಟಿ ಚಿನ್ನದ ಗಣಿ ಗುತ್ತಿಗೆಯ ಹೆಸರಿನಲ್ಲಿ ಅಕ್ರಮ ಮರಳು ದಂಧೆ ಮತ್ತು ಮರಳನ್ನು ಹೇರಿಕೊಂಡ ವಾಹನಗಳ ಓವರ್ ಸ್ಪೀಡ್ನಿಂದ ಆಗುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ಗಮನ ಸೆಳೆಯಲಾಗಿತ್ತು.
ಜಿಲ್ಲಾಧಿಕಾರಿಯವರ ಗಮನಕ್ಕೆ ತಂದ ಮಾರನೇ ದಿನವೇ ಘನಘೋರ ಅಪಘಾತ ನಡೆದಿರುವುದು ದುರ್ದೈವದ ಸಂಗತಿ ಎಂದು ರವೀಂದ್ರಗೌಡ ಎಫ್. ಪಾಟೀಲ ವಿಷಾದ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ ತಾಲ್ಲೂಕಿನ ಅಂಕಸಾಪುರ ರಸ್ತೆಯಲ್ಲಿ ಲಾರಿ ಮತ್ತು ಕಾರಿನ ಮಧ್ಯೆ ನಡೆದ ಅಪಘಾತ ಮೇಲ್ನೋಟಕ್ಕೆ ಸಾಮಾನ್ಯ ರಸ್ತೆ ಅಪಘಾತದಂತೆ ಕಂಡುಬಂದಿದ್ದರೂ ಕೂಡ, ಅಕ್ರಮ ಮರಳಿಗೆ ಸಂಬಂಧಪಟ್ಟಿದ್ದು. ಅಕ್ರಮ ಮರಳಿನ ಬಗ್ಗೆ ವರದಿ ಮಾಡಲು ಹೋಗಿದ್ದ ಸಂದರ್ಭದಲ್ಲಿಯೇ ನಡೆದ ದುರ್ಘಟನೆಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಏನೇ ಆದರೂ ಜೀವ ಅಮೂಲ್ಯ.
ಈ ಬಗ್ಗೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ, ಜಿಲ್ಲಾಧಿಕಾರಿಗಳು ಎಚ್ಚೆತ್ತು ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಿ ಎಂದು ಪಾಟೀಲರು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಇಟಗಿ-ಮುದೇನೂರು ರಸ್ತೆಯಲ್ಲಿ ಇಂತದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದೇ ಕುಟುಂಬದ ನಾಲ್ಕು ಜನರ ದುರ್ಮರಣವಾದ ಬಗ್ಗೆ ಗಮನಕ್ಕೆ ತಂದ ಮಾರನೇ ದಿನವೇ ಮತ್ತೊಂದು ಅದೇ ಅಕ್ರಮ ಮರಳಿನ ವಿಷಯಕ್ಕೆ ಸಂಬಂಧಪಟ್ಟ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಇನ್ನಿಬ್ಬರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವುದು ವಿಷಾದದ ಸಂಗತಿ ಎಂದು ರವೀಂದ್ರಗೌಡ ಪಾಟೀಲ ಹೇಳಿದ್ದಾರೆ.