‘ಅಮುಲ್’ ಹಾಲು ಉತ್ಪನ್ನ ಮಾರಾಟ ಹಿಂಪಡೆಯದಿದ್ದರೆ ಕರ್ನಾಟಕ ಬಂದ್‍ಗೆ ಕರೆ

‘ಅಮುಲ್’ ಹಾಲು ಉತ್ಪನ್ನ ಮಾರಾಟ ಹಿಂಪಡೆಯದಿದ್ದರೆ ಕರ್ನಾಟಕ ಬಂದ್‍ಗೆ ಕರೆ

ರಾಣೇಬೆನ್ನೂರು, ಏ.10- ರಾಜ್ಯದ ಮಾರುಕಟ್ಟೆಯಿಂದ ಗುಜರಾತ್ ಮೂಲದ ‘ಅಮುಲ್’ ಹಾಲು ಉತ್ಪನ್ನಗಳ ಮಾರಾಟವನ್ನು ಹಿಂಪಡೆದು ರಾಜ್ಯದ ಹಿತ ಕಾಯದಿದ್ದರೆ ರಸ್ತೆಗಿಳಿದು ಹೋರಾಟ ಪ್ರಾರಂಭಿಸಿ ‘ಕರ್ನಾಟಕ ಬಂದ್’ ಗೆ ಕರೆ ನೀಡುತ್ತೇವೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ಮತ್ತು ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅವರು ಇಂದು ರಾಣೇಬೆನ್ನೂರು ತಹಶೀಲ್ದಾರ್‌ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್‌ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡಿಗರು ಕಟ್ಟಿ ಬೆಳೆಸಿದ್ದ ಬ್ಯಾಂಕ್, ಬಂದರೂ, ವಿಮಾನ ನಿಲ್ದಾಣಗಳು ಸೇರಿದಂತೆ ಕನ್ನಡಿಗರ ಸ್ವಾಭಿಮಾನದ ವಿಜಯ ಬ್ಯಾಂಕನ್ನು ಕೂಡಾ ನುಂಗಿದ ಬರೋಡ ಬ್ಯಾಂಕ್ ಗುಜರಾತಿನದ್ದು, ಬಂದರು ವಿಮಾನ ನಿಲ್ದಾಣಗಳನ್ನು ನುಂಗಿದ ಅದಾನಿಯವರು ಕೂಡ ಗುಜರಾತಿನವರು. ಈಗ  ಕೆ.ಎಂ.ಎಫ್. ನುಂಗಲು ಹೊರಟಿರುವ ಅಮುಲ್ ಕೂಡ ಗುಜರಾತಿನದ್ದು, ಈ ಗುಜರಾತಿನವರ  ಆಕ್ರಮಣವನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಕರ್ನಾಟಕದಲ್ಲಿ `ಅಮುಲ್’ ಉತ್ಪನ್ನಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು. ಕನ್ನಡಿಗರ ನಾಡ ಪ್ರೇಮ, ಸ್ವಾಭಿಮಾನವನ್ನು ಕೆಣಕುವ ಗೊಡವಿಗೆ ಹೋಗಬೇಡಿ, ಪರಿಣಾಮ ನೆಟ್ಟಗಿರದು ಎಂದು ಈ ಮೂಲಕ ಎಚ್ಚರಿಸುತ್ತಾ, ಈ ಹಿಂದಿನ ತಮ್ಮ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟವನ್ನು ನೆನಪಿಸುತ್ತಿದ್ದೇವೆ ಎಂದರು.  

ದಿನಗೂಲಿ ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೊಂಗಿಯವರ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. 

ಸುರೇಶ ಮಲ್ಲಾಪುರ, ವಿರುಪಾಕ್ಷಗೌಡ ಪಾಟೀಲ, ವಿಶ್ವನಾಥ ಮುದ್ದಪ್ಪಳವರ, ನಾಗಪ್ಪ ಬಣಕಾರ, ಮಲ್ಲೇಶಪ್ಪ ಕೆಂಪಣ್ಣನವರ, ತಿಪ್ಪಣ್ಣ ಜೋಗಿ, ಯಲ್ಲಪ್ಪ ಓಲೇಕಾರ, ಹನುಮಂತಪ್ಪ ತಳವಾರ, ಶ್ರೀಧರ ಮಾಳಗೇರ, ರಾಜು ಓಲೇಕಾರ, ಜಗದೀಶ ಕೆರೂಡಿ, ಇಕ್ಬಾಲ್‍ಸಾಬ್ ರಾಣೇಬೆನ್ನೂರು, ಶಿವರಾಜ ಎಚ್.ಎಂ. ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ತಹಶೀಲ್ದಾರ್ ಕೆ. ಗುರುಬಸವರಾಜ್ ಮನವಿ ಸ್ವೀಕರಿಸಿ ತುರ್ತಾಗಿ ಸಂಬಂಧಿಸಿದವರಿಗೆ ಕಳುಹಿಸಿಕೊಡಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ್‌ ಎಂ.ಎಸ್. ಬನ್ನೂರ ಮಠ, ಕಂದಾಯ ನಿರೀಕ್ಷಕ ಎಂ.ಎಸ್. ಕೆಂಚರಡ್ಡೇರ ಉಪಸ್ಥಿತರಿದ್ದರು.

error: Content is protected !!