ಕೊಟ್ಟೂರು, ಮಾ. 5 – ಪಟ್ಟಣದ ಕೋಟೆ ಭಾಗದ ಪೂರ್ವದ ಶ್ರೀ ವೀರಭ ದ್ರೇಶ್ವರ ಸ್ವಾಮಿ ಮತ್ತು ರೇಣುಕಾಚಾರ್ಯ ಸ್ವಾಮೀಜಿಗಳ ಮೂರ್ತಿಗಳ ಜೋಡಿ ರಥೋ ತ್ಸವ ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಭಕ್ತರ ಸಡಗರ, ಸಂಭ್ರಮಗಳೊಂದಿಗೆ ಜರುಗಿದವು.
ರಥೋತ್ಸವ ಚಾಲನೆ ಪಡೆಯುವುದಕ್ಕಿಂತ ಮುಂಚಿತವಾಗಿ ಉಭಯ ದೇವರುಗಳ ಮೂರ್ತಿಗಳನ್ನು ಆಯಾಗಾರ ಬಳಗದವರು ದೇವಸ್ಥಾನದಿಂದ ಸಕಲ ಬಿರುದಾವಳಿಗಳೊಂದಿಗೆ ಮೆರವಣಿಗೆ ಕೈಗೊಂಡು ಹೊರತಂದು ರಥಗಳ ಬಳಿಗೆ ತೆರಳಿದರು. ನಂತರ ಉತ್ಸವ ಮೂರ್ತಿಗಳನ್ನು ರಥದ ಸುತ್ತ ಮೂರು ಪ್ರದಕ್ಷಿಣೆಗಳನ್ನು ಹಾಕಿದರು. ವೀರಭದ್ರೇಶ್ವರ ರಥದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಕ್ರಿಯಾ ಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು, ರೇಣುಕ ಮೂರ್ತಿ ರಥದಲ್ಲಿ ಆರ್.ಎಂ.ಕೊಟ್ರೇಶ ಶಾಸ್ತ್ರೀ ಆಸೀನರಾಗಿದ್ದರು.
ನಂತರ ಶ್ರೀ ಸ್ವಾಮಿ ಪಟಾಕ್ಷಿ ಹರಾಜು ಪ್ರಕ್ರಿಯೆ ನಡೆದು 110000 ರೂ. ಗಳಿಗೆ ಕೂಗಿ ಹಳ್ಳಿ ನಾಗರಾಜ್, ತಮ್ಮದಾಗಿಸಿಕೊಂಡರು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜೋಡಿ ರಥೋತ್ಸವ ಆರಂಭಗೊಂಡಿತು. ರಥೋತ್ಸವ ಗೌಡರ ಬೀದಿ, ಹಿರೇಮಠ, ಮುಖ್ಯ ರಸ್ತೆ ಮೂಲಕ ಸಾಗಿ ನಂತರ ದೇವಸ್ಥಾನದ ಬಳಿ ಬಂದು ನೆಲೆ ನಿಂತಿತು. ಆಯಗಾರ ಬಳಗದ ಆರ್.ಎಂ, ಗುರು ಬಸವಸ್ವಾಮಿ, ಮಂಜುನಾಥ ಗೌಡ, ಶಿವಕುಮಾರ ಗೌಡ, ರಾಜುಗೌಡ, ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.