ಕೊಟ್ಟೂರು, ಫೆ.16- ಪಟ್ಟಣದಲ್ಲಿ ಗುರುವಾರ ಸಂಜೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹದ ನಡುವೆ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಮಾಘ ಬಹುಳ ದಶಮಿಯ ಮೂಲಾ ನಕ್ಷತ್ರ ಕೂಡಿದಾಗ ಕೊಟ್ಟೂರೇಶ್ವರರು ಜೀವಂತ ಸಮಾಧಿಯಾಗಿದ್ದರು, ಆ ಸಂದರ್ಭದಲ್ಲಿ ಪ್ರತಿ ವರ್ಷವೂ ಸ್ವಾಮಿಯ ರಥೋತ್ಸವ ಜರುಗುವುದು ವಿಶೇಷ. ಪಟ್ಟಣದ ಪರಿಶಿಷ್ಟ ಜಾತಿಯ ಸುಮಂಗಲೆಯರು ಆರತಿ ಬೆಳಗಿ, ನೈವೇದ್ಯ ಸಮರ್ಪಿಸಿದ ನಂತರ ಸ್ವಾಮಿಯ ರಥೋತ್ಸವ ಜರುಗುವುದು ಸನಾತನ ಕಾಲದಿಂದ ನಡೆದುಕೊಂಡ ಪದ್ಧತಿ ವಿಶೇಷವೂ ಆಗಿದೆ.
ಬೆಳಿಗ್ಗೆಯಿಂದಲೇ ಶ್ರೀ ಗುರು ಕೊಟ್ಟೂರೇಶ್ವರ ರಿಗೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಆ ನಂತರ ವಿವಿಧ ಕಡೆಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಇಡೀ ದಿನ ದೇಗುಲದ ಪರಿಸರದಲ್ಲಿ ಜನ ಜಾತ್ರೆ ಇದ್ದು ಸರತಿ ಸಾಲಿನಲ್ಲಿ ತಡಹೊತ್ತು ನಿಂತು ಭಕ್ತರು ದೇವರ ದರ್ಶನ ಪಡೆದರು.
ಕೊಟ್ಟೂರೇಶ್ವರ ದೇವಸ್ಥಾನದಿಂದ ಭಕ್ತರು ಕೊಟ್ಟೂರೇಶ್ವರ ಪಲ್ಲಕ್ಕಿಯನ್ನು ಹೊತ್ತು ದಲಿತ ಮಹಿಳೆ ಆರತಿ ಬೆಳಗುವುದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂದಿ ಧ್ವಜ ನಂದಿಕೋಲು ಕುಣಿತ ಸಮಳ ತಂಡಗಳು ಮೆರವಣಿಗೆಯಲ್ಲಿ ಸಾಗಿ ಮೆರಗು ಹೆಚ್ಚಿಸಿದರು. ರಥೋತ್ಸವಕ್ಕೆ ಸುತ್ತಲೂ ಭಕ್ತರು ಪ್ರದಕ್ಷಣೆ ಹಾಕಿದರು.
ಈ ವೇಳೆ ರಥಕ್ಕೆ ಏಣಿ ಜೋಡಿಸಿ ಕೊಟ್ಟೂರೇಶ್ವರ ಉತ್ಸವ ಮೂರ್ತಿಯನ್ನು ಅದರೊಳಗೆ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ನೆರೆದಿದ್ದ ಲಕ್ಷಾಂತರ ಭಕ್ತರ ನಡುವೆ ಅದ್ಧೂರಿಯಾಗಿ ರಥವನ್ನು ಎಳೆಯಲಾಯಿತು. ಭಕ್ತರು ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು.