ಕೋಲಾರ ಪ್ರಕರಣ ಸಿಬಿಐಗೆ ವಹಿಸಲು ಜಗಳೂರು ದಸಂಸ ಆಗ್ರಹ

ಕೋಲಾರ ಪ್ರಕರಣ ಸಿಬಿಐಗೆ  ವಹಿಸಲು ಜಗಳೂರು ದಸಂಸ ಆಗ್ರಹ

ಜಗಳೂರು, ಜ.6- ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಹಾಗೂ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು, ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲಿಖಿತ ಮನವಿ ಸಲ್ಲಿಸಿದರು.

ಮುಖಂಡ   ಪೂಜಾರ್ ಸಿದ್ದಪ್ಪ ಮಾತನಾಡಿ, ದಲಿತ ಕುಟುಂಬದ ಹನುಮಂತಪ್ಪನವರ ಮೂಕ ಪ್ರಾಣಿಗಳಾದ ಹಸುಗಳು, ರಾಮೇಗೌಡನ ಜಮೀನಿನಲ್ಲಿ ಮೇಯಿಸಿದ ಕಾರಣಕ್ಕೆ ಹನುಮಂತಪ್ಪ ಅವರಿಗೆ ಚಾಕು ಇರಿದಿದ್ದಲ್ಲದೆ, ಸಹೋದರನಾದ ರೆಡ್ಡೆಪ್ಪ ಅವರ ಮೇಲೆ ಹಲ್ಲೆ‌ ಮಾಡಿ,   ಗುಡಿಸಲಿಗೆ ಬೆಂಕಿ ಹಚ್ಚಿರುವುದು ಖಂಡನೀಯ ಎಂದರು.

ವಕೀಲ ಹನುಮಂತಪ್ಪ ಮಾತನಾಡಿ, ಮನುವಾದಿಗಳು ಕೋಲಾರ ಜಿಲ್ಲೆಯ ದಲಿತ ಸಮುದಾಯದ  ಹನುಮಂತಪ್ಪ ಅವರ ಗುಡಿಸಲಿಗೆ ಬೆಂಕಿ ಹಚ್ಚಿರುವುದು ದೌರ್ಜನ್ಯದ ಪರಮಾವಧಿ, ಘಟನಾ ಸ್ಥಳಕ್ಕೆ, ಸಮಯಕ್ಕೆ ಸರಿಯಾಗಿ ಪೊಲೀಸರು ಆಗಮಿಸದಿದ್ದರೆ ಕಂಬಾಲಪಲ್ಲಿ ಪ್ರಕರಣ ಮರುಕಳಿಸುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಕುಬೇಂದ್ರಪ್ಪ, ಮುಖಂಡರಾದ ವಕೀಲ ಆರ್. ಓಬಳೇಶ್,  ಮಾದಿಹಳ್ಳಿ ಮಂಜುನಾಥ್, ಶಿವಣ್ಣ, ರವಿ, ಮೆದಗಿನಕೆರೆ ಹನುಮಂತಪ್ಪ, ಮುನಿಸ್ವಾಮಿ, ಪಲ್ಲಾಗಟ್ಟೆ ರಂಗಪ್ಪ  ಮತ್ತಿತರರು ಭಾಗವಹಿಸಿದ್ದರು.

error: Content is protected !!