ಪೊಲೀಸರ ಕರ್ತವ್ಯ ಲೋಪದ ವಿರುದ್ಧ ಲೋಕ ಸ್ಪಂದನಾ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ, ದೂರು ದಾಖಲಿಸಲು ಅವಕಾಶ

ಪೊಲೀಸರ ಕರ್ತವ್ಯ ಲೋಪದ ವಿರುದ್ಧ ಲೋಕ ಸ್ಪಂದನಾ  ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ, ದೂರು ದಾಖಲಿಸಲು ಅವಕಾಶ

ಜಗಳೂರಿನ ಜನ ಸಂಪರ್ಕ ಸಭೆಯಲ್ಲಿ  ಅಹವಾಲು ಸ್ವೀಕರಿಸಿದ ಎಸ್ಪಿ ಉಮಾ ಪ್ರಶಾಂತ್

ಜಗಳೂರು, ಡಿ.2- ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಲೋಕಸ್ಪಂದನಾ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಮಹಿಳೆಯರ ರಕ್ಷಣೆ, ವಿದ್ಯಾರ್ಥಿಗಳಿಗೆ ಭದ್ರತೆ,  ಟ್ರ್ಯಾಫಿಕ್ ಸಮಸ್ಯೆ, ಸಿಗ್ನಲ್ ಅಳವಡಿಕೆ, ಕಾಲೇಜು ರಸ್ತೆಗಳಲ್ಲಿ ಕರ್ಕಶ ಶಬ್ಧ ಸಂಚಾರ, ಬೀದಿ ಬದಿ ವ್ಯಾಪಾರಿಗಳಿಗೆ ಪೊಲೀಸರಿಂದ ಆಗುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿಮ್ಮ ಗಂಭೀರ ಸಲಹೆ ಮತ್ತು ದೂರುಗಳನ್ನು ಶೀಘ್ರವೇ ಬಗೆಹರಿಸುತ್ತೇವೆ ಎಂದರು.

ವರದಿ ಆಧಾರದ ಮೇಲೆ ಕ್ರಮ: ಠಾಣೆಗೆ ಬಂದ ವಕೀಲರನ್ನು ಕಕ್ಷಿದಾರರ ಎದುರು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪಟ್ಟಣದ ಠಾಣೆ ಇನ್ಸ್‍ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಅವರನ್ನು ತಕ್ಷಣವೇ ಅಮಾನತ್ತು ಮಾಡಬೇಕು ಎಂಬ ವಕೀಲರ ಮನವಿಗೆ ವಿಚಾರಣಾ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ವಕೀಲರ ಸಲಹೆಗಳನ್ನು ಇಲಾಖೆ ಪ್ರಾಮಾಣಿಕವಾಗಿ ಸ್ವೀಕರಿಸುತ್ತದೆ. ಉತ್ತಮ ಸಮಾಜ ಕಟ್ಟಬೇಕಾದರೆ ವಕೀಲರು ಸೇರಿದಂತೆ, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು. 

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಓಂಕಾರೇಶ್ವರ್ ಮಾತನಾಡಿ, ಸಾರ್ವಜನಿಕ ಸೊತ್ತಾದ ಠಾಣೆಯಲ್ಲಿ ಯಾರನ್ನೂ ಅಗೌರವದಿಂದ ನಡೆಸಿಕೊಳ್ಳಬಾರದು. ದೂರು ಕೊಡಲು ಬಂದವರನ್ನು ಗೌರವದಿಂದ ನಡೆಸಿಕೊಳ್ಳುವುದು ಠಾಣಾಧಿಕಾರಿಗಳ ಕರ್ತವ್ಯ. ಆದರೆ ಪಿಐ ಶ್ರೀನಿವಾಸ್‍ರಾವ್ ವಕೀಲರಿಗೆ ಅಗೌರವ ತೋರಿದ್ದಾರೆ. ಠಾಣೆಗೆ ಬಂದವರನ್ನು ಮರ್ಯಾದೆಯಿಂದ ನಡೆಸಿಕೊಳ್ಳುವುದಿಲ್ಲ ಎಂದು ಸಭೆಯಲ್ಲಿ ಎಸ್ಪಿಯ ಗಮನಕ್ಕೆ ತಂದರು. 

ಸಾರ್ವಜನಿಕರಿಂದ ಬಂದ ಸಲಹೆಗಳು; ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಟ್ರ್ಯಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಟ್ರಾಫಿಕ್ ಪೊಲೀಸರೇ ಇಲ್ಲ. ರಸ್ತೆಯ ಎರಡೂ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಾಮಾಲಯ ರಸ್ತೆಯನ್ನು ಒನ್ ವೇ ಮಾಡಿ ಎಂದು ಪಪಂ ಸದಸ್ಯ ಆರ್.ತಿಪ್ಪೇಸ್ವಾಮಿ ಸಲಹೆ ನೀಡಿದರು.

ಡಿ.ಎಸ್.ಎಸ್. ಸಂಚಾಲಕ ಸತೀಶ್, ಚಿಕ್ಕ ಉಜ್ಜಿನಿ ಗ್ರಾಮದಲ್ಲಿ  ದಲಿತ ಮಹಿಳೆಯ ಮೇಲೆ ಅವಾಚ್ಯ ಶಬ್ದ ನಿಂದನೆ ಪ್ರಕರಣಕ್ಕೆ ಮೂರು ವರ್ಷಗಳಾದರೂ ನ್ಯಾಯ ಸಿಕ್ಕಿಲ್ಲ ಎಂದು ಒತ್ತಾಯಿಸಿದರು. 

ಕಾಂಗ್ರೆಸ್ ಮುಖಂಡ ಕಾನನಕಟ್ಟೆ ಪ್ರಭು, ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುವ ಮುನ್ನ ಪೊಲೀಸರು ಗ್ರಾಮದ ಹಿರಿಯರನ್ನು ಕರೆಸಿ ಕೂಲಂಕುಶವಾಗಿ ಪರಿಶೀಲಿಸಿ ಕೇಸ್ ದಾಖಲಿಸಲಿ. ಸಾಮಾನ್ಯ ಜನರಿಗೆ ನ್ಯಾಯ ಸಿಗಬೇಕು. ಎಂದರು. 

ಗುರುಸಿದ್ದಾಪುರ ಗ್ರಾಮದ ಶಿವಮೂರ್ತಿ, 40 ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಿಕೊಳ್ಳುತ್ತಿದ್ದು ಮಾಗಡಿ ಗ್ರಾಮದವರು ಉಳುಮೆಗೆ ಬಿಡುತ್ತಿಲ್ಲ. ಎಲ್ಲ ದಾಖಲಾತಿಗಳು ಇದ್ದರೂ ಅಡ್ಡಿ ಪಡಿಸುತ್ತಿದ್ದಾರೆ. ನನಗೆ ನ್ಯಾಯ ಕೊಡಿ ಎಂದು ಕೋರಿಕೊಂಡರು.   ಗ್ಯಾಸ್ ಓಬಪ್ಪ, ಸಾಮಾಜಿಕ ಜಾಗೃತಿ, ಟ್ರ್ಯಾಫಿಕ್ ಸಮಸ್ಯೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಜನ ಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಹೆಚ್ಚಿಸಿ ಎಂದು ಮನವಿ ಮಾಡಿಕೊಂಡರು. 

ಆರ್.ಟಿ.ಐ. ಕಾರ್ಯಕರ್ತ ವಿನಯ್, ಕ್ಯಾಸೇನಹಳ್ಳಿ ಗ್ರಾಮದ ಸತ್ಯಪ್ಪ, ಪ.ಪಂ ಸದಸ್ಯೆ ಮಂಜಮ್ಮ ಸೇರಿದಂತೆ ಇತರರು ಪಟ್ಟಣದ ಅನೇಕ ಸಮಸ್ಯೆಗಳ ಬಗ್ಗೆ ದೂರು ನೀಡಿದರು. 

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಿ.ಎಸ್.ಬಸವರಾಜ್, ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ಇನ್‍ಸ್ಪೆಕ್ಟರ್ ಶ್ರೀನಿವಾಸ್‍ರಾವ್, ಪಿಎಸ್‌ಐ ಗಳಾದ ಡಿ.ಎಸ್.ಸಾಗರ್ ಸೇರಿದಂತೆ  ಇತರರು ಭಾಗವಹಿಸಿದ್ದರು.

error: Content is protected !!