ಹೊನ್ನಾಳಿ, ಮಾ.27- ಪಂಚಾಂಗದ ಪ್ರಕಾರ ಹಿಂದೂಗಳಿಗೆ ಹೊಸ ವರ್ಷವೆಂದೇ ಕರೆಯಲಾಗುವ ಸಂಭ್ರಮದ ಯುಗಾದಿ ಹಬ್ಬದಂತೆ ರೈತರು ಹೊಸ ಬೇಸಾಯವನ್ನು ಹೊನ್ನಾಳಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಯುಗಾದಿ ದಿನ ಆರಂಭಿಸುತ್ತಾರೆ.
ಹೊಸ ವರ್ಷದ ಯುಗಾದಿಯಂದು ಮಾಡುವ ಎಲ್ಲಾ ಕೆಲಸಗಳು ಒಳ್ಳೆಯದಾಗುತ್ತವೆ ಎಂಬ ನಂಬಿಕೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಯುಗಾದಿ ಹಬ್ಬದಂದು ಎತ್ತುಗಳಿಗೆ ಪೂಜೆ ಮಾಡಿ, ಮನೆಯಲ್ಲಿ ಹಬ್ಬ ಆಚರಿಸಿದ ನಂತರ ಮನೆಯಲ್ಲಿ ಮಾಡಿದ ನೈವೇದ್ಯಗಳನ್ನು ತಮ್ಮ ತಮ್ಮ ಜಮೀನುಗಳಿಗೆ ತಂದು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ನಂತರ ಒಂದೆರಡು ಸುತ್ತು ಉಳುಮೆ ಮಾಡಿ ಮರಳುತ್ತಾರೆ.
ನೂತನ ಶ್ರೀ ಶೋಭಕೃತ ನಾಮ ಸಂವತ್ಸರ ವಸಂತ ಋತುವಿನ ಚೈತ್ರ ಮಾಸದ, ಶುಕ್ಲ ಪಕ್ಷದ ಪಾಡ್ಯದಂದು ರೈತರು ಭೂಮಿ ಉಳುಮೆ ಮಾಡಿದರು.
ಬೇಲಿಮಲ್ಲೂರು, ಮಾಸಡಿ, ಅರಕೆರೆ, ನರಸಗೊಂಡನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಯುಗಾದಿಯಂದೇ ಬೇಸಾಯ ಆರಂಭಿಸಿ, ಈ ಬಾರಿ ಒಳ್ಳೆ ಮಳೆ ಹಾಗೂ ಬೆಳೆ ನೀಡಪ್ಪಾ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಬರುವ ಪ್ರತೀತಿ ಇರುವುದರಿಂದ ಪ್ರತಿ ವರ್ಷ ರೈತರು ಈ ಆಚರಣೆಯನ್ನು ಕೈ ಬಿಡದೆ ತಮ್ಮ ಹಿರಿಯುರು ಮಾಡಿಕೊಂಡು ಬಂದ ಹೊಸ ಬೇಸಾಯದ ಧಾರ್ಮಿಕ ಪದ್ದತಿಯನ್ನು ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಬೇಲಿಮಲ್ಲೂರು ಗ್ರಾಮದ ರೈತ ಬಸವರಾಜಪ್ಪ ಎಂಬುವರು ತಮ್ಮ ಕುಟುಂಬ ಸಮೇತ ಜಮೀನಿಗೆ ಬಂದು ಎತ್ತುಗಳಿಗೆ ಪೂಜೆ ಹಾಗೂ ಅಲಂಕಾರ ಮಾಡಿ ಉಳುಮೆ ಮಾಡಿದರು.