ಜಮೀನಿನಲ್ಲಿ ರೈತ ಮಹಿಳೆಯ ಮೇಲೆ ಕರಡಿ ದಾಳಿ

ಜಮೀನಿನಲ್ಲಿ ರೈತ ಮಹಿಳೆಯ ಮೇಲೆ ಕರಡಿ ದಾಳಿ

ಹೊನ್ನಾಳಿ : ತಕ್ಷಣವೇ ಕರಡಿ ಸೆರೆ ಹಿಡಿಯುವಂತೆ ರೈತರ ಒತ್ತಾಯ

ಹೊನ್ನಾಳಿ, ಜ. 3 –  ತಾಲ್ಲೂಕಿನ ಚಿಕ್ಕಬಾಸೂರು ತಾಂಡಾದ ರೈತ ಮಹಿಳೆ ಸುಮಾರು 60 ವರ್ಷದ ರುದ್ರಿಬಾಯಿ ಅವರು ತಮ್ಮ ಜಮೀನಿನಲ್ಲಿ ಬುಧವಾರ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕರಡಿಯು ಏಕಾಏಕಿ ದಾಳಿ ಮಾಡಿ ತೀವ್ರತರನಾಗಿ ಗಾಯಗೊಳಿಸಿದ್ದು ಹಲ್ಲೆಗೊಳಗಾದ ಮಹಿಳೆಯನ್ನು ರುದ್ರಿಬಾಯಿಯ ಕುಟುಂಬಸ್ಥರು ಸಂಜೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಿದ್ದರು.

ಘಟನೆಯ ವಿವರ : ತಮ್ಮ ಗ್ರಾಮದಿಂದ 2 ಕಿ.ಮೀ. ದೂರವಿರುವ ತಮ್ಮ ಸ್ವಂತ ಜಮೀನಿನಲ್ಲಿ ಅವರೆಕಾಯಿ ಬೆಳೆದಿದ್ದು, ಅದನ್ನು ಕೀಳಲು ರುದ್ರಿಬಾಯಿ ಅವರು ಬುಧವಾರ ಬೆಳಿಗ್ಗೆ ಒಬ್ಬರೇ ಹೊಲಕ್ಕೆ ಹೋಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಕರಡಿಯು ರುದ್ರಿಬಾಯಿಯ ಮೇಲೆ ದಾಳಿ ಮಾಡಿ ಎಡಗೈಗೆ 7 ಬಾರಿ ಉಗುರಿನಿಂದ ತೆರಚಿದ್ದಲ್ಲದೇ ಸೊಂಟಕ್ಕೆ ಬಾಯಿಯಿಂದ ಕಚ್ಚಿ ತೀವ್ರತರನಾಗಿ ಗಾಯಗೊಳಿಸಿತ್ತು. ಮಹಿಳೆಯು ಜೋರಾಗಿ ಕೂಗಿ ಕೊಂಡರೂ ಅಕ್ಕ-ಪಕ್ಕದ ಜಮೀನಿನಲ್ಲಿ ಯಾರೂ ಇರದ ಕಾರಣ ಸ್ವಯಂ ರಕ್ಷಣೆಗೆ ಹೋರಾಡಿದ್ದಾರೆ. ನಂತರ ಕರಡಿಯು ತೀವ್ರತರನಾಗಿ  ಗಾಯಗೊಳಿಸಿ ಹೊರಟು ಹೋದ ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ರುದ್ರಿಬಾಯಿ ಅವರು ತಮ್ಮ ಮನೆ ತಲುಪಿದ್ದಾರೆ. ಇವರ ಪರಿಸ್ಥಿತಿಯನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಇವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.

ಮಹಿಳೆಯ ಮೇಲೆ ಕರಡಿ ದಾಳಿ ಮಾಡಿರುವ ಮಾಹಿತಿ ತಿಳಿದ ಶಾಂತಿಸಾಗರ ವಲಯದ ಮಾವಿನಕಟ್ಟೆಯ
ಅರಣ್ಯಾಧಿಕಾರಿ ಎಂ.ಉಮಾ, ಉಪವಲಯ ಅರಣ್ಯಾಧಿಕಾರಿ ಮೈಲಾರಪ್ಪ, ಸಿಬ್ಬಂದಿ ಮಿರ್ಜಾ ಮತ್ತು ಮುಸ್ತಾಕ್ ಅಹ್ಮದ್ ತಂಡದವರ ಜೊತೆಗೆ ಗುರುವಾರ ಬೆಳಿಗ್ಗೆ ಮಹಿಳೆಯು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು.

ಅರಣ್ಯಾಧಿಕಾರಿ ಎಂ.ಉಮಾ ಅವರು ಕರಡಿಯಿಂದ ದಾಳಿಗೊಳಗಾಗಿರುವ ಮಹಿಳೆಗೆ ಸರ್ಕಾರದಿಂದ ದಯಾತ್ಮಕ ಪರಿಹಾರವನ್ನು ದೊರಕಿಸಿಕೊಡಲು ಕ್ರಮ ಜರುಗಿಸಲಾಗುವುದು ಎಂದು ಪತ್ರಿಕೆಗೆ ಮಾಹಿತಿ ನೀಡಿದರು.

ಕರಡಿ ಹಿಡಿಯಲು ಒತ್ತಾಯ: ತಕ್ಷಣವೇ ಶಾಸಕ ಡಿ.ಜಿ.ಶಾಂತನಗೌಡ ಅವರು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಕರಡಿ ಸೆರೆ ಹಿಡಿಯುವಂತೆ ಕ್ರಮ ಜರುಗಿಸಬೇಕೆಂದು ಈ ಭಾಗದ ರೈತರು-ಸಾರ್ವಜನಿಕರು ಒತ್ತಾಯಿಸಿದ್ದಾರೆ.

error: Content is protected !!