ದುಸ್ಥಿತಿಯಲ್ಲಿರುವ ಕೊಠಡಿಗಳಿಂದ ಶಿಕ್ಷಣಕ್ಕೆ ಅಡ್ಡಿ

ದುಸ್ಥಿತಿಯಲ್ಲಿರುವ ಕೊಠಡಿಗಳಿಂದ ಶಿಕ್ಷಣಕ್ಕೆ ಅಡ್ಡಿ

ತಹಶೀಲ್ದಾರ್‌ಗೆ ಹೊನ್ನಾಳಿ ತಾಲ್ಲೂಕು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಮನವಿ

ಹೊನ್ನಾಳಿ, ಜು.10- ತಾಲ್ಲೂಕಿನ ಮಾದಾಪುರ ಸರ್ಕಾರಿ ಶಾಲೆಯಲ್ಲಿ ಕೊಠಡಿ ಇಲ್ಲದೇ ದೇವಸ್ಥಾನ ಉಗ್ರಾಣಗಳಲ್ಲಿ ಪಾಠ ಪ್ರವಚನ ಮಾಡುತ್ತಿದ್ದು, ಇದೇ ರೀತಿ ಅನೇಕ ಶಾಲೆಗಳು ದುಸ್ಥಿತಿಯಲ್ಲಿದ್ದು, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು  ಹೊನ್ನಾಳಿ ತಾಲ್ಲೂಕು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಅಧ್ಯಕ್ಷ ಎ.ಎಸ್. ಶಿವಲಿಂಗಪ್ಪ ಹುಣಸಘಟ್ಟ ಹೇಳಿದರು.

ಅವರು ಸೋಮವಾರ ತಾಲ್ಲೂಕಿನ ಸರ್ಕಾರಿ ಶಾಲೆಗಳ ದುಸ್ಥಿತಿ ಹಾಗೂ ಕೆಲವಾರು ಶಿಕ್ಷಕರ ಕರ್ತವ್ಯದ ನಿರ್ಲಕ್ಷ್ಯ ತನದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆಯಾ ಗುತ್ತಿದೆ. ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ ಸೇರಿ ಇಲಾಖೆಯಲ್ಲಿನ  ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ತಿರುಪತಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. 

ಪ್ರಸ್ತುತ ಮಳೆಗಾಲವಾದ್ದರಿಂದ ಅನೇಕ ಶಾಲಾ ಕಟ್ಟಡಗಳು ಸೋರುತ್ತಿದ್ದು, ಮಕ್ಕಳ ಪಾಠ, ಪ್ರವಚನ ಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ರೀತಿ ದುಸ್ಥಿತಿಯಲ್ಲಿರುವ ಶಾಲೆಗಳ ಕೊಠಡಿಗಳನ್ನು ಕೂಡಲೇ ದುರಸ್ತಿ ಮಾಡಬೇಕು.  ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕೂಡ ಇದೆ, ಅತಿಥಿ ಶಿಕ್ಷಕರನ್ನು ಕೂಡಲೇ ನೇಮಕಮಾಡಿಕೊಳ್ಳಬೇಕು ಎಂದು ಅವರು  ಹೇಳದರು. 

ತಾಲ್ಲೂಕಿನ ಅನೇಕ ಶಾಲೆಗಳಲ್ಲಿ ಶಿಕ್ಷಕರು 10 ರಿಂದ 20 ವರ್ಷಗಳಿಂದ ಒಂದೇ ಕಡೆ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದು ಇವರುಗಳು ಸ್ಥಳೀಯವಾಗಿ ಪ್ರಭಾವಿತರಾಗಿ  ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹಾಜರಾಗದೇ ಕೆಲ ಶಿಕ್ಷಕರಂತೂ ಸದಾ ಬಿ.ಇ.ಓ. ಕಚೇರಿಯಲ್ಲಿಯೇ  ತಿರುಗಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ಪಾಠಗಳಿಂದ ವಂಚಿತರಾಗುತ್ತಿದ್ದಾರೆ. ಇವರನ್ನು ಕೇಳುವವರೇ ಇಲ್ಲದಂತಾಗಿದ್ದು, ಇಂತಹ ಶಿಕ್ಷಕರನ್ನು ಗುರುತಿಸಿ, ಮುಲಾಜಿಲ್ಲದೇ ಅಧಿಕಾರಿಗಳು ಕ್ರಮ ಜರುಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. 

ಸರ್ಕಾರ ಶಿಕ್ಷಕರಿಗೆ  ಸಂಬಳ ಕೊಡುತ್ತಿರುವುದು ಮಕ್ಕಳಿಗೆ ಪಾಠ ಕಲಿಸಲು, ಆದರೆ ಕೆಲವಾರು ಶಿಕ್ಷಕರು ತಮ್ಮ ಕರ್ತವ್ಯವನ್ನು ಮರೆತು ಬೇರೆ ಬೇರೆ ಉಪಕಸುಬುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲ್ಲೂಕು ಸಮಿತಿಯವರು ಶಿಕ್ಷಣ  ಸಚಿವರಿಗೆ ಹಾಗೂ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ  ಇಂತಹ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲು ಮನವಿ ಕೂಡಲು ತೀರ್ಮಾನಿಸಿದೆ.  ಇದರ ಜೊತೆಗೆ 10 ರಿಂದ 20 ವರ್ಷ ಒಂದೇ ಕಡೆ ಒಂದೇ ಶಾಲೆಯಲ್ಲಿ ಠಿಕಾಣಿ ಹೂಡಿರುವ ಶಿಕ್ಷಕರ ಪಟ್ಟಿ ಮಾಡಿ, ಇಂತಹ ಶಿಕ್ಷಕರನ್ನು ಕೂಡಲೇ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆಗೆ ತಾಲ್ಲೂಕು ಕಾರ್ಯದರ್ಶಿ ಕೆ.ಬಿ. ಸತೀಶ್ ಬನ್ನಿಕೋಡು, ಎ.ಕೆ. ರಮೇಶ್,  ಎಸ್.ಇ. ಅರ್ಚನಾ, ನ್ಯಾಮತಿ ತಾಲ್ಲೂಕು ಅಧ್ಯಕ್ಷ  ಬಿ.ವಿ.ರಾಜಶೇಖರ, ಎಲ್. ರುದ್ರಾನಾಯ್ಕ,  ಸಂಘಟನಾ ಕಾರ್ಯದರ್ಶಿ ರಮೇಶ್, ರಂಜಿತ ಸೇರಿದಂತೆ ಅವಳಿ ತಾಲ್ಲೂಕುಗಳ ಪದಾಧಿಕಾರಿಗಳು ಇದ್ದರು.

error: Content is protected !!