ವಾಲ್ಮೀಕಿ ಸಮುದಾಯ ಭವನದ ಅಭಿವೃದ್ಧಿಗೆ 1 ಕೋಟಿ ಅನುದಾನ

ವಾಲ್ಮೀಕಿ ಸಮುದಾಯ ಭವನದ ಅಭಿವೃದ್ಧಿಗೆ 1 ಕೋಟಿ ಅನುದಾನ

ಹೊನ್ನಾಳಿ ಶಾಸಕ ಶಾಂತನಗೌಡ ಭರವಸೆ

ಹೊನ್ನಾಳಿ, ಜೂ.30- ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಬೃಹತ್ ಹಾಗೂ ಪವಿತ್ರ ಗ್ರಂಥ ರಚಿಸಿದ್ದರಿಂದಾಗಿ ಇಡೀ ಜಗತ್ತಿನಲ್ಲಿ ವಾಲ್ಮೀಕಿ ಸಮುದಾಯವನ್ನು ಗುರುತಿಸುವಂತಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಹೊನ್ನಾಳಿ ತಾಲ್ಲೂಕು ಶ್ರೀ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ ನೂತನ ಶಾಸಕರ ಸನ್ಮಾನ ಸಮಾರಂಭದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ಹೊನ್ನಾಳಿಯಲ್ಲಿ ಯಾವುದಾದರು ಒಂದು ಸಮುದಾಯದ ವ್ಯವಸ್ಥಿತ ಸಮುದಾಯ ಭವನ ಇದೆ ಎಂದಾದರೇ ಆದು ವಾಲ್ಮೀಕಿ ಸಂಘದ ಸಮುದಾಯ ಭವನ ಎಂದ ಅವರು, ಈ ಸಮುದಾಯ ಭವನದ ಅಭಿವೃದ್ಧಿಗೆ  ಒಂದು ಕೋಟಿ ಅನುದಾನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಹಿಂದೆ 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ದೇಶದಲ್ಲಿಯೇ ಪ್ರಥಮ ಎನಿಸುವಂತೆ ಸುಮಾರು 6 ಕೋಟಿ ಎಸ್ಸಿ-ಎಸ್ಟಿ ಜನ ಸಮುದಾಯಕ್ಕೆ ಆಯ-ವ್ಯಯದಲ್ಲಿ ಶೇ. 24.1 ರಷ್ಟು ಅನುದಾನ ಕಾಯ್ದಿರಿಸುವ ಕಾಯ್ದೆ ಜಾರಿ ಮಾಡಿದ್ದು, ಈ ಕೀರ್ತಿ  ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ  ಎಂದು ಹೇಳಿದರು.

ಈಗಾಗಲೇ ಶಕ್ತಿ ಯೋಜನೆ ಅನುಷ್ಠಾನಗೊಂಡಿದೆ. ಇಷ್ಟರಲ್ಲೇ 200 ಯೂನಿಟ್‌ ಉಚಿತ ವಿದ್ಯುತ್‌ಗೆ ಕೂಡ ನೋಂದಣಿ ನಡೆಯುತ್ತಿದ್ದು, ಜುಲೈ ನಂತರ ಇದೂ ಕೂಡ ಅನುಷ್ಟಾನಗೊಳ್ಳಲಿದೆ, ಮನೆ ಯಜಮಾನಿಗೆ ರೂ. 2 ಸಾವಿರ, 10 ಕೆ.ಜಿ ಅಕ್ಕಿ ವಿತರಣೆ ಯೋಜನೆ  ಸೇರಿದಂತೆ   ಹಂತ ಹಂತವಾಗಿ ಸರ್ಕಾರ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

ತಾಲ್ಲೂಕು ಶ್ರೀ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಶಿವಾನಂದಪ್ಪ ಮಾತನಾಡಿ, 2013ರಲ್ಲಿ ಶಾಂತನಗೌಡರು ಸಮುದಾಯ ಭವನಕ್ಕೆ 50 ಲಕ್ಷ ನೀಡಿದ್ದರು. ನಂತರದಲ್ಲಿ  ಶಾಸಕರಾಗಿದ್ದ ರೇಣುಕಾಚಾರ್ಯ ಅವರೂ ಕೂಡ ತಮ್ಮ ಎರಡು ಅವಧಿಯಲ್ಲಿ ತಲಾ 1 ಕೋಟಿಯಂತೆ ಒಟ್ಟು 2 ಕೋಟಿ  ಅನುದಾನವನ್ನು ಮಂಜೂರು ಮಾಡಿಸಿ ಕೊಟ್ಟಿದ್ದು, ಇದೀಗ ಸಮುದಾಯ ಭವನ ಕಟ್ಟಡ ನಿರ್ಮಾಣವಾಗಿದ್ದರೂ ಕೂಡ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಬಾಕಿ ಇದ್ದು, ಇದಕ್ಕಾಗಿ ಈಗಿನ ಶಾಸಕ ಡಿ.ಜಿ.ಶಾಂತನಗೌಡ ಅವರು 1 ಕೋಟಿ ಅನುದಾನ ಮಂಜೂರು ಮಾಡಿಸಿಕೊಡಬೇಕೆಂದು ಸಮಾಜದ ವತಿಯಿಂದ ಮನವಿ ಮಾಡಿದರು. 

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಕುಳಗಟ್ಟೆ ರಂಗನಾಥ್, ಕೋಣನತಲೆ ನಾಗಪ್ಪ, ಮಾಜಿ ಅಧ್ಯಕ್ಷ ತಿಮ್ಮೇನಹಳ್ಳಿ ಚಂದಪ್ಪ, ಉಪಾಧ್ಯಕ್ಷ ಕೋಣನತಲೆ ನಾಗೇಂದ್ರಪ್ಪ,  ಕ್ಯಾಸಿನಕೆರೆ ಶೇಖರಪ್ಪ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿ ಮುರುಡೇಶ್, ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷರಾದ ಶಿಕ್ಷಕ ಆಂಜನೇಯ ಸೇರಿದಂತೆ ಅನೇಕರು  ಮಾತನಾಡಿದರು.

ತಾ. ವಾಲ್ಮೀಕಿ ಸಂಘದ ಪದಾಧಿಕಾರಿಗಳಾದ  ಸಿ.ಹನುಮಂತಪ್ಪ, ಎಂ.ಆರ್. ಹನುಮಂತಪ್ಪ, ಟಿ.ಮಲ್ಲಪ್ಪ, ನಾಗರಾಜ್,  ಡಿ.ಬಿ.ರಮೇಶ್, ಲಿಂಗಾಪುರ ಪರಶುರಾಮ, ಗಂಡುಗಲಿ ಮಂಜಪ್ಪ, ಮಾರಿಕೊಪ್ಪದ ತಿಮ್ಮಪ್ಪ, ಹೊನ್ನಾಳಿ ಪುರಸಭಾ ಸದಸ್ಯ ರಾಜೇಂದ್ರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರುದ್ರಪ್ಪ ಹಾಗೂ  ಇತರರು ಉಪಸ್ಥಿತರಿದ್ದರು.

error: Content is protected !!