ವೇಮನ ಗುರುಪೀಠದಲ್ಲಿ ಆಡಿಟೋರಿಯಂ ನಿರ್ಮಾಣ

ವೇಮನ ಗುರುಪೀಠದಲ್ಲಿ ಆಡಿಟೋರಿಯಂ ನಿರ್ಮಾಣ

ಹೊಸಹಳ್ಳಿ : ಹೇಮ-ವೇಮ ಸದ್ಬೋಧನಾ ವಿದ್ಯಾಪೀಠದ ದಶಮಾನೋತ್ಸವದಲ್ಲಿ ಗಾಲಿ ಜನಾರ್ದನ ರೆಡ್ಡಿ ಭರವಸೆ

ಜಾತ್ಯತೀತ ನಿಲುವಿನಲ್ಲಿ ನಂಬಿಕೆ ಇಟ್ಟು ಬೆಳೆದು ಬಂದಿರುವ ರೆಡ್ಡಿ ಸಮಾಜವು, ಎಲ್ಲರಿಗೂ ಒಳ್ಳೆಯದನ್ನೇ ಬಯಸಲಿದೆ : ವೇಮನ ಶ್ರೀಗಳು

ಮಲೇಬೆನ್ನೂರು, ಜ.7- ವೇಮಾನಾನಂದ ಶ್ರೀಗಳು ಮತ್ತು ಬಸವಕುಮಾರ ಶ್ರೀಗಳ ಆಶಯ ದಂತೆ ಈ ಸ್ಥಳದಲ್ಲಿ 5 ಕೋಟಿ ರೂ. ವೆಚ್ಚದ ಸುಸಜ್ಜಿತ ಆಡಿಟೋರಿಯಂ ನಿರ್ಮಿಸಿಕೊಡುವುದಾಗಿ ಮಾಜಿ ಸಚಿವರೂ ಆದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಅವರು, ಭಾನುವಾರ ಸಂಜೆ ಹೊಸಹಳ್ಳಿಯ ಮಹಾಯೋಗಿ ವೇಮನ ಸಂಸ್ಥಾನದ ರೆಡ್ಡಿ ಗುರಪೀಠದಲ್ಲಿ ಹಮ್ಮಿಕೊಂಡಿದ್ದ ಹೇಮ-ವೇಮ ಸದ್ಬೋಧನಾ ವಿದ್ಯಾಪೀಠದ ದಶಮಾನೋತ್ಸವದ 3ನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು, ತೊಂದರೆಗಳು ಬರುವುದು ಸಹಜ. ಅದೇ ರೀತಿ ನನ್ನ ಜೀವನದಲ್ಲಿ ಸ್ವಲ್ಪ ಹೆಚ್ಚು ಕಷ್ಟ-ತೊಂದರೆಗಳನ್ನು ಅನುಭವಿಸಿ, ಗೆದ್ದು ಬಂದಿದ್ದೇನೆ. ಮುಂದೆ ಇನ್ನೂ ಉತ್ತಮ ಅವಕಾಶಗಳು ಸಿಗುವ ನಂಬಿಕೆ ನನಗಿದ್ದು, ಕನ್ನಡ ನಾಡಿನ ಜನರ ಸೇವೆ ಮಾಡುತ್ತೇನೆ ಮತ್ತು ಈ ಗುರುಪೀಠ ಹಾಗೂ ವಿದ್ಯಾಪೀಠದ ಏಳಿಗೆಗೂ ಶ್ರಮಿಸುತ್ತೇನೆಂದು ಜನಾರ್ದನ ರೆಡ್ಡಿ ಭಾವನಾತ್ಮ ಕವಾಗಿ ಹೇಳಿ ಜನರ ಗಮನ ಸೆಳೆದರು.

ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ ಮಾತನಾಡಿ, ಅಧ್ಯಾತ್ಮಿಕ ಚೇತನ ವೇಮನರ ಕುರುವನ್ನು ಇಲ್ಲಿ ಶ್ರೀಗಳು ನಿರ್ಮಾಣ ಮಾಡಿದ್ದಾರೆ.ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜೊತೆಗೆ ಗುಣವಂತರನ್ನಾಗಿ ಮಾಡುವ  ಸದ್ಭೋದನೆಯನ್ನು ಶ್ರೀಗಳು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಮಾಜಿ ಸಚಿವರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಆರ್.ಪಾಟೀಲ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.  ನವಲಗುಂದ ಶಾಸಕ ಕೋನರೆಡ್ಡಿ,  ವಿಧಾನ ಪರಿಷತ್ ಸದಸ್ಯ ಪಿ.ಹೆಚ್.ಪೂಜಾರ್  ಮಾತನಾಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ವೇಮಾನಂದ ಸ್ವಾಮೀಜಿ ಮಾತನಾಡಿ, ನಾವು ಕೈ ಹಾಕುವ ಎಲ್ಲಾ ಕೆಲಸಗಳಿಗೆ ರೆಡ್ಡಿ ಸಮಾಜದವರ ಜೊತೆಗೆ ಇತರರೂ ಕೈ ಜೋಡಿಸಿದ್ದಾರೆ. ಜಾತ್ಯತೀತ ನಿಲುವಿನಲ್ಲಿ ನಂಬಿಕೆ ಇಟ್ಟು ಬೆಳೆದಿರುವ ರೆಡ್ಡಿ ಸಮಾಜವು ಎಲ್ಲಾ ಜನರಿಗೆ ಒಳ್ಳೆಯದನ್ನೇ ಬಯಸಲಿದೆ. ನಾವು ಕೂಡಾ ಎಲ್ಲಾ ವರ್ಗಗಳ ಜನರ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ,  ಸಿದ್ದಗಂಗಾ ಮಠದ ಮಾದರಿಯಲ್ಲೇ 5 ಸಾವಿರ ಮಕ್ಕಳಿಗೆ ಶಿಕ್ಷಣ, ಅನ್ನ ದಾಸೋಹ, ವಸತಿಯನ್ನು ಉಚಿತವಾಗಿ ನೀಡುವ ಸಂಕಲ್ಪವನ್ನು ಶ್ರೀಗಳು ಹೊಂದಿದ್ದಾರೆ ಎಂದು ಹೇಳಿದರು.

ಈ ವೇಳೆ ದಾವಣಗೆರೆಯ ಪ್ರೀತಿ ಆರೈಕೆ ಟ್ರಸ್ಟಿನ ಡಾ. ಟಿ.ಜಿ.ರವಿ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ಎ.ಗೋವಿಂದರೆಡ್ಡಿ, ದಾನಿಗಳಾದ ಶಿವಾನಂದ ಮೇಲಗೇರಿ, ಕೆ.ಪಿ.ಪಾಟೀಲ್, ಗಂಗಾವತಿಯ ರಾಜೇಶ್ ರೆಡ್ಡಿ, ವಕೀಲ ಚೌಡ ರೆಡ್ಡಿ, ಆನೇಕಲ್ ಸೋಮಶೇಖರ್ ರೆಡ್ಡಿ, ಎಸ್ಆರ್‌ಟಿ ಅಶೋಕ್ ರೆಡ್ಡಿ, ಆರ್.ಪಿ.ರೆಡ್ಡಿ, ಕಾರಟಗಿಯ ವೆಂಕಟರೆಡ್ಡಿ, ಬಾಗಲಕೋಟೆಯ ನಿವೃತ್ತ ಇಇ ಗಳಾದ ಎನ್.ಪಿ.ಪಾಟೀಲ್, ಸಿ.ಹೆಚ್.ಕಟಗೇರಿ, ರೆಡ್ಡಿ ಜನ ಸಂಘದ ನಾಗರಾಜ್ (ಮರಿ) ದಾವಣಗೆರೆಯ ಉದ್ಯಮಿ ರಾಜಾ ರೆಡ್ಡಿ, ಮುದೋಳ್ ಉದ್ಯಮಿ ಹೆಚ್.ಎಲ್.ಪಾಟೀಲ್, ಜಮಖಂಡಿಯ ವಕೀಲ ಲಕ್ಷ್ಮಣ ಊದಪುರಿ ಸೇರಿದಂತೆ ಇನ್ನೂ ಅನೇಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ವಿದ್ಯಾಪೀಠದ ಹೊಸಹಳ್ಳಿಯ ವೈ.ದ್ಯಾವಪ್ಪ ರೆಡ್ಡಿ, ನಂದಿಗಾವಿ ರಾಜಣ್ಣ ರೆಡ್ಡಿ, ಬಿಳಸನೂರಿನ ಹನುಮಂತ ರೆಡ್ಡಿ, ರಂಗಪ್ಪ ರೆಡ್ಡಿ, ಕಡ್ಲೆಗೊಂದಿಯ ಹನುಮಂತರೆಡ್ಡಿ, ಕಾನೂನು ಸಲಹೆಗಾರ ರುದ್ರೇಶ್, ಆಡಳಿತಾಧಿಕಾರಿ ಸುಭಾಸ್ ಮತ್ತಿತರರು ಹಾಜರಿದ್ದರು.

error: Content is protected !!