ಅಕ್ರಮ ಪಂಪ್‌ಸೆಟ್‌ಗಳ ತೆರವು : ಕೊನೆ ಭಾಗಕ್ಕೆ ನೀರು, ನಿಟ್ಟುಸಿರು ಬಿಟ್ಟ ರೈತರು

ಅಕ್ರಮ ಪಂಪ್‌ಸೆಟ್‌ಗಳ ತೆರವು : ಕೊನೆ ಭಾಗಕ್ಕೆ ನೀರು, ನಿಟ್ಟುಸಿರು ಬಿಟ್ಟ ರೈತರು

ಮೇಲ್ಭಾಗದಲ್ಲಿರುವ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ತೀವ್ರಗೊಳಿಸಲು ಆಗ್ರಹ

ಮಲೇಬೆನ್ನೂರು, ನ.4- ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ತಲುಪಿಸುವ ಉದ್ದೇಶದಿಂದ ಭದ್ರಾ ನಾಲೆಯಲ್ಲಿ ಅಕ್ರಮವಾಗಿ ಅಳವಡಿಸಿಕೊಂಡಿದ್ದ ಪಂಪ್‌ ಸೆಟ್‌ಗಳ ತೆರವು ಕಾರ್ಯಾಚರಣೆ ಸದ್ಯ ಯಶಸ್ವಿಯಾಗಿದೆ.

ಇದರ ಪರಿಣಾಮ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ಶುಕ್ರವಾರ ಸಂಜೆ ವೇಳೆ ಕಾಲುವೆಗಳ ಮೂಲಕ ನೀರು ತಲುಪಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಮಲೇಬೆನ್ನೂರು ಉಪವಿಭಾಗ ವ್ಯಾಪ್ತಿಯ ಕಾಲುವೆಗಳಲ್ಲಿ ನೀರಿನ ಹರಿವೂ ಹೆಚ್ಚಾಗಿತ್ತು.

ಮಲೇಬೆನ್ನೂರಿನಲ್ಲಿರುವ ಭದ್ರಾ ನಾಲಾ ನಂ.3 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ವ್ಯಾಪ್ತಿ ಯಲ್ಲಿ ಗುರುವಾರದಿಂದ ಆರಂಭ ಗೊಂಡ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ಶನಿವಾರ ಸಂಜೆಗೆ ಮುಕ್ತಾಯಗೊಂಡಿದೆ.

ಬಸವಾಪಟ್ಟಣ ಮತ್ತು ಮಲೇಬೆನ್ನೂರು ಉಪವಿಭಾಗಗಳ ವ್ಯಾಪ್ತಿಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಎಇಇ ಧನುಂಜಯ ಅವರು ಕಳೆದ 3 ದಿನಗಳಿಂದ ಆಯಾ ಭಾಗದ ಬೆಸ್ಕಾಂ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೆರವಿನೊಂದಿಗೆ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ. ಗುರುವಾರ ಬಸವಾಪಟ್ಟಣ, ಹರಲೀಪುರ ಭಾಗದಲ್ಲಿ 150 ಮತ್ತು ಶುಕ್ರವಾರ ಮಲೇಕುಂಬಳೂರು, ಕುಂದೂರು, ಯಕ್ಕನಹಳ್ಳಿ ವ್ಯಾಪ್ತಿಯಲ್ಲಿ 70 ಹಾಗೂ ಶನಿವಾರ ಕೊಪ್ಪ, ಕೊಮಾರನಹಳ್ಳಿ, ಮಲೇಬೆನ್ನೂರು, ಜಿ.ಬೇವಿನಹಳ್ಳಿ, ಯಲವಟ್ಟಿವರೆಗೆ ನಡೆದ ಕಾರ್ಯಾಚರಣೆಯಲ್ಲಿ 23 ಸೇರಿದಂತೆ ಒಟ್ಟು 243 ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಶನಿವಾರದ ಕಾರ್ಯಾಚರಣೆಯಲ್ಲಿ ಎಇಇ ಧನುಂಜಯ ಅವರೊಂದಿಗೆ ಉಪತಹಶೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮಲೆಕ್ಕಾಧಿಕಾರಿ ಅಣ್ಣಪ್ಪ, ಗ್ರಾಮ ಸಹಾಯಕರಾದ ಹಾಲಿವಾಣದ ಸಂತೋಷ್, ಉಕ್ಕಡಗಾತ್ರಿ ಸೇರಿದಂತೆ ಮಲೇಬೆನ್ನೂರು ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಬೆಸ್ಕಾಂ ಸಿಬ್ಬಂದಿ ಭಾಗವಹಿಸಿದ್ದರು.

ಕ್ರಮಕ್ಕೆ ಆಗ್ರಹ : ಅಕ್ರಮ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡಿದ್ದವರ ಮೇಲೆ ಕಾನೂರು ಕ್ರಮ ಕೈಗೊಳ್ಳಬೇಕು ಮತ್ತು ಬಸವಾಪಟ್ಟಣದ ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ತೀವ್ರಗೊಳಿಸಬೇಕೆಂದು ಕಾರ್ಯಾಚರಣೆ ವೇಳೆ ರೈತರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

error: Content is protected !!