ಕಡತಿ ನದಿ ತೀರದ ಸಂಕ್ರಾಂತಿ ಜಾನಪದ ಕಾರ್ಯಕ್ರಮದಲ್ಲಿ ಹರಪನಹಳ್ಳಿ ಶಾಸಕರಾದ ಲತಾ
ಹರಪನಹಳ್ಳಿ.ಜ.14. ನಭೋಮಂಡಲದಲ್ಲಿ ಪ್ರತಿ ವರ್ಷ ನಿಗದಿತ ದಿನಕ್ಕೆ, ನಿಗದಿತ ಸಮಯಕ್ಕೆ ಸಂಭವಿಸುವ ಅಚ್ಚರಿಯ ಪ್ರತಿಫಲವೇ ಸಂಕ್ರಾಂತಿ. ಸೂರ್ಯ ತನ್ನ ಚಲನ ಮಾರ್ಗವನ್ನು ಉತ್ತರಾಯಣ ದಿಂದ ದಕ್ಷಿಣಾಯಣಕ್ಕೆ ಬದಲಾಯಿಸುತ್ತಾನೆ. ಈ ಮಹಾಚಲನೆ ಇಡೀ ವಿಶ್ವದ ಪರಿಸರದ ದಿಕ್ಕನ್ನೇ ಪರಿವರ್ತಿಸುತ್ತದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ಕಡತಿ ಬಳಿ ಇರುವ ತುಂಗಭದ್ರಾ ನದಿ ತೀರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಔತಣಕೂಟ ಹಾಗೂ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ದರು.
ಸಂಕ್ರಮಣವು ಕೇವಲ ಭೌಗೋಳಿಕ ಬದಲಾವಣೆಯಾಗಿ ಉಳಿದಿಲ್ಲ. ಅದಕ್ಕೆ ಪೌರಾಣಿಕ, ಐತಿಹಾಸಿಕ, ಜಾನಪದ, ವೈಜ್ಞಾನಿಕ ಹಾಗೂ ಕಲಾತ್ಮಕ ಮುಖಗಳೂ ಸೇರಿಕೊಂಡಿವೆ. ಸೂರ್ಯ ದಕ್ಷಿಣ ದಿಕ್ಕಿನತ್ತ ಚಲನೆ ನಿಲ್ಲಿಸಿ ಉತ್ತರಕ್ಕೆ ವಾಲುವುದೇ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಬೇಸಿಗೆಯ ಮುನ್ಸೂಚನೆ. ಇನ್ನಾರು ತಿಂಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡುವ ಸೂರ್ಯದೇವ ಮತ್ತೆ ಹಳೆ ಮಾರ್ಗಕ್ಕೆ ಅಂದರೆ ದಕ್ಷಿಣಾಯಣಕ್ಕೆ ವಾಲುತ್ತಾನೆ. ಆಗ ಬೇಸಿಗೆ ಮುಗಿದು ಮತ್ತೆ ಚಳಿಗಾಲ ಆರಂಭವಾಗುತ್ತದೆ.
ಹಿಂದೂಗಳ ಪಾಲಿಗೆ ಸಂಕ್ರಾಂತಿ ಸಡಗರದ ಹಬ್ಬ. ಕೌಟುಂಬಿಕ ಭ್ರಾಂತಿಗಳನ್ನು ದೂರ ಮಾಡಿ ನವಕ್ರಾಂತಿ ತರುವ ಕಾಲ. ಈ ಕಾರಣಕ್ಕಾಗಿಯೇ ಹಳ್ಳ-ಕೊಳ್ಳಗಳ ಬಳಿ ಹೋಗಿ ಪುಣ್ಯಸ್ನಾನ ಮಾಡಿ ಬರುವ ಆಚರಣೆ ಇದೆ. ಸೂರ್ಯನ ಹಾಗೆಯೇ ಬದುಕಿನ ಚಲನೆಗಳು ಬದಲಾಗಲಿ ಎನ್ನುವುದು ಹಬ್ಬದ ಸಂದೇಶವಾಗಿದೆ ಎಂದರು.
ನಿಸರ್ಗದಲ್ಲಾಗುವ ಬದಲಾವಣೆಗೆ ಜನ ಸಮು ದಾಯ ತೋರುವ ಸ್ಪಂದನೆ ರೂಪದ ಹಲವು ಆಚರಣೆಗಳಲ್ಲಿ ಸಂಕ್ರಾಂತಿಯೂ ಒಂದು. ಸೂರ್ಯ ಒಂದು ರಾಶಿಯೊಳಗಿನ ಹೆಜ್ಜೆಯನ್ನು, ಮತ್ತೊಂದ ರಲ್ಲಿ ಇಡುವುದರ ಸಾಂಕೇತಿಕ ಸಂಭ್ರಮವಿದು. ಹನ್ನೆರಡು ರಾಶಿ, ಮಾಸಗಳ ಕಾರಣ ವರ್ಷಕ್ಕೆ ಹನ್ನೆರಡು ಸಂಕ್ರಾಂತಿಗಳೇ ಸಂಭವಿಸುತ್ತವೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರಪ್ಪ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಬಿನೈಂಟಿ ಸೂಸೈಟಿ ಅಧ್ಯಕ್ಷ. ಎಂ.ವಿ. ಕೃಷ್ಣಕಾಂತ, ಉಪಾಧ್ಯಕ್ಷ ಉಮಾ ಶಂಕರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರೆಡ್ಡಿ ಶಾಂತನಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಸದಸ್ಯರಾದ ಲಾಟಿ ದಾದಾಪೀರ್, ಗೊಂಗಡಿ ನಾಗರಾಜ, ಪೈಲ್ವಾನ್ ಗಣೇಶ, ಚಿಕ್ಕೇರಿ ಹನುಮಕ್ಕ, ಅಂಜುಮನ್ ಮಾಜಿ ಅಧ್ಯಕ್ಷ ಸಿ.ಜಾವೀದ್, ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ನಿವೃತ್ತ ಇ.ಓ. ಎಚ್.ಎಂ.ಕೊಟ್ರಯ್ಯ, ಚಿಕ್ಕೇರಿ ಬಸಪ್ಪ, ಮೈದೂರು ರಾಮಣ್ಣ, ಎಚ್.ಟಿ.ವನಜಾಕ್ಷಮ್ಮ, ಗುಂಡಗತ್ತಿ ನೇತ್ರಾವತಿ, ಎಚ್.ಟಿ.ಹನುಮಂತಪ್ಪ, ಟಿ.ಎಂ.ಶಿವಶಂಕರ್, ಇರ್ಫಾನ್ ಸೇರಿದಂತೆ ಇತರರು ಇದ್ದರು.