ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಕಟ್ಟಡದ ಸ್ಥಳಕ್ಕೆ ಗೃಹ ಮಂಡಳಿ ಅಧಿಕಾರಿಗಳ ಭೇಟಿ: ಪರಿಶೀಲನೆ

ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಕಟ್ಟಡದ ಸ್ಥಳಕ್ಕೆ ಗೃಹ ಮಂಡಳಿ ಅಧಿಕಾರಿಗಳ ಭೇಟಿ: ಪರಿಶೀಲನೆ

ಹರಪನಹಳ್ಳಿ, ನ.4- ತಾಲ್ಲೂಕಿನ ಶೃಂಗಾರತೋಟದ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡದ ಸ್ಥಳಕ್ಕೆ ಕರ್ನಾಟಕ ಗೃಹ ಮಂಡಳಿ ಮುಖ್ಯ ಅಭಿಯಂತರ ಎಸ್.ಶರಣಯ್ಯ ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿರ್ಮಾಣ ಹಂತದಲ್ಲಿರುವ ಈ ವಸತಿ ಶಾಲಾ ಕಟ್ಟಡದ ಸ್ಥಳದ ಪಕ್ಕದಲ್ಲಿ ಕೆರೆ ಇದ್ದು, ಕೆರೆಯ ನೀರು ಕಟ್ಟಡಕ್ಕೆ ನುಗ್ಗಿ ಮುಂದೆ ಹಾನಿ ಸಂಭವಿಸಬಹುದು ಎಂದು ಕಳೆದ ಆಗಸ್ಟ್‌ 14 ರಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸಮ್ಮುಖದಲ್ಲಿ ಹರಪನಹಳ್ಳಿಯಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಈ ವಿಷಯ ಕುರಿತು ಸಚಿವರ ಗಮನಕ್ಕೆ ತಂದಿದ್ದರು. ಆಗ ಸಚಿವರು ಕೂಡಲೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಅಭಿಯಂತರ ಶರಣಯ್ಯ ಅವರು, ಈ ವಸತಿ ಶಾಲಾ ಕಟ್ಟಡ ಈಗಾಗಲೇ ಮುಗಿಯುವ ಹಂತಕ್ಕೆ ತಲುಪಿದ್ದು, ಕಟ್ಟಡಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ, ಕಟ್ಟಡಕ್ಕೆ ಕೆರೆ ನೀರು ನುಗ್ಗದಂತೆ ಕೆರೆಯ ಸುತ್ತ ಇರುವ ಮೂರು ನಾಲೆಗಳು ಬ್ಲಾಕ್ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಈ ಕಟ್ಟಡದ ಕಾಮಗಾರಿಯನ್ನು ಮೂರನೇ ತಂಡ ತಪಾಸಣೆ ನಡೆಸಿ ವರದಿ ನೀಡಿದ್ದು, ಅದರಂತೆ ತಯಾರಿಸಿದ ನೀಲಿ ನಕ್ಷೆಯಂತೆ ಕಾಮಗಾರಿ ಮುಂದುವರೆಯಲಿದೆ. ಕಟ್ಟಡದೊಳಕ್ಕೆ ಕೆರೆ ನೀರು ಬರದಂತೆ ತಡೆಯಲು ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿಯ ಅಭಿಯಂತರರಾದ ಸೈಯ್ಯದ್, ಸುಧೀರ್‌ ಬನಾರೆ ಪ್ರಿಯಾ ಸೇರಿದಂತೆ ಮತ್ತಿತರರು ಇದ್ದರು.

error: Content is protected !!