ಹರಪನಹಳ್ಳಿ,ಜು.24- ಮೆಕ್ಕೆಜೋಳ, ಶೇಂಗಾ ಬಿತ್ತನೆ ಮಾಡಿದ್ದ ರೈತರ ಹೊಲಗಳಿಗೆ ಕಾಡು ಹಂದಿಗಳು ನುಗ್ಗಿ ಮೊಳಕೆ ಒಡೆದಿದ್ದ ಮೆಕ್ಕೆಜೋಳ ಹಾಗೂ ಶೇಂಗದ ಬೀಜಗಳನ್ನು ಹೆಕ್ಕಿ ತಿಂದು ಹೋಗಿದ್ದು, ಪರಿಹಾರ ನೀಡಬೇಕು ಹಾಗೂ ಹಂದಿಗಳ ಉಪಟಳದಿಂದ ಪಾರು ಮಾಡುವಂತೆ ಒತ್ತಾಯಿಸಿ, ತಾಲ್ಲೂಕಿನ ಬಾವಿಹಳ್ಳಿ ಗ್ರಾಮಸ್ಥರು ಪಟ್ಟಣದ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಾವಿಹಳ್ಳಿ ಗ್ರಾಮದ ಮಂಜುನಾಥ ಹಾಗೂ ಕೆ.ಪತ್ರಪ್ಪ ಮಾತನಾಡಿ, ತಾಲ್ಲೂಕಿನ ಬಾವಿಹಳ್ಳಿ ಗ್ರಾಮಕ್ಕೆ ಸೇರಿದ ಜಮೀನುಗಳಿಗೆ ಕಾಡು ಹಂದಿಗಳು ಹಾಗೂ ಇನ್ನಿತರೇ ಪ್ರಾಣಿಗಳು ಜಾಜಿಕಲ್ ಕಾದಿಟ್ಟ ಅರಣ್ಯ ವ್ಯಾಪ್ತಿಯಿಂದ ಬಂದು ಸಂಪೂರ್ಣ ಬೆಳೆ ನಾಶ ಮಾಡುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದು, ಅರಣ್ಯ ಇಲಾಖೆಯವರು ಶಾಶ್ವತ ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ ಮಲ್ಲಪ್ಪ ಮಾತನಾಡಿ, ಕಾಡು ಹಂದಿಗಳು ಹಾಗೂ ಇನ್ನಿತರೆ ಪ್ರಾಣಿಗಳಿಂದ ಹೊಲಗಳಿಗೆ ಹಾನಿಯಾಗಿದ್ದನ್ನು ಪರಿಶೀಲಿಸಿ ನಾನು ಮೇಲಾಧಿಕಾರಿಗಳ ಗಮನಕ್ಕೆ ತಂದು ವೈಯಕ್ತಿಕ ಗಮನಹರಿಸಿ ಅಲ್ಲಿಗೆ ತಂಡ ರಚನೆ ಮಾಡಿ, ಶಬ್ದಗಳ ಮುಖಾಂತರ ಪ್ರಾಣಿಗಳನ್ನು ಓಡಿಸುವ ಕೆಲಸದ ಜೊತೆಗೆ ಹೊಲಗಳ ಹಂಚಿನಲ್ಲಿ ಬೇಲಿಯನ್ನು ಹಾಕಿಕೊಳ್ಳಬೇಕು ಎಂದು ಸಲಹೆ ನಿಡಿದರು. ಈ ವೇಳೆ ಗ್ರಾಮ ಸ್ಥರಾದ ಎಚ್.ಸುರೇಶ, ಟಿ.ಪರಮೇಶ್ವರ, ಕೆ.ಚಿನ್ನಪ್ಪ, ಎಚ್.ಭದ್ರಪ್ಪ, ಎನ್. ನಂದೇಶ, ಎನ್.ಅಜ್ಜಪ್ಪ, ಟಿ.ಬಸವರಾಜ, ಕೆ.ಜಗದೀಶ, ಎನ್. ಚಿದಾನಂದಪ್ಪ, ಬಿ.ರವಿಕುಮಾರ, ಕೆ.ಬಸವರಾಜ, ಟಿ.ಕೃಷ್ಣಪ್ಪ, ಎನ್. ನಂದೀಶ ಸೇರಿದಂತೆ ಇತರರರು ಇದ್ದರು.