ಹರಪನಹಳ್ಳಿ, ಜೂ.11- ಹರಪನಹಳ್ಳಿಯಿಂದ ಹೊಸಪೇಟೆಗೆ ಬಸ್‍ನಲ್ಲಿ ಪ್ರಯಾಣಿಸಿ, ಶಕ್ತಿ ಯೋಜನೆಗೆ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನಿಜವಾಗಿ ಇಂದು ಮಹಿಳೆಯರಿಗೆ ಸ್ವಾತಂತ್ರ ಸಿಕ್ಕಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಮಹಿಳೆಯರ, ಜನಸಾಮಾನ್ಯರ, ಬಡವರ, ಪರಿಶಿಷ್ಟ ಜಾತಿ, ಪಂಗಡದವರ ಪರವಾಗಿ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ರಾಜ್ಯದ 4 ಸಾರಿಗೆ ನಿಗಮಗಳ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆ ಬಸ್‌ಗಳಲ್ಲಿ ಕರ್ನಾಟಕ ರಾಜ್ಯದ ಒಳಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಶಕ್ತಿ ಯೋಜನೆ ದಿಟ್ಟ ಹೆಜ್ಜೆಯಾಗಿದ್ದು, ಶಕ್ತಿ ಯೋಜನೆ ಮಹಿಳೆಯರ ಸ್ವಾವಲಂಬನೆಗೆ ಹೆಚ್ಚು ಅನುಕೂಲವಾಗಲಿದೆ. ವಿದ್ಯಾರ್ಥಿನಿಯರ ಸಹಿತವಾಗಿ ಮಹಿಳೆಯರು ಇದರ ಅನುಕೂಲ ಪಡೆಯಬಹುದು. ಈ ಯೋಜನೆ ಅಡಿ ನಾಲ್ಕು ಸಾರಿಗೆ ಸಂಸ್ಥೆಗಳಿಂದ 56 ಸಾವಿರ ಕೋಟಿ ನಷ್ಟವಾಗಲಿದ್ದು, ಮಹಿಳೆಯರು ವಿನಾಕಾರಣ ಉಚಿತವಾಗಿ ಪ್ರಯಾಣ ಮಾಡದೆ ತಮ್ಮಗಳ ಕೆಲಸವಿದ್ದಲ್ಲಿ ಪ್ರಯಾಣಿಸಿ ಸರ್ಕಾರಕ್ಕೆ ಹೊರೆಯಾಗದಂತೆ ಪ್ರಯಾಣಿಸಿ ಎಂದರು.
ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಮಾತನಾಡಿ, ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಮಹಿಳೆಯರು ಭಾರತ ಸರ್ಕಾರ, ಕರ್ನಾಟಕ ಸರ್ಕಾರದ ಇಲಾಖೆ, ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಶೂನ್ಯ ಟಿಕೆಟ್ ವಿತರಿಸುವ ಸಂದರ್ಭದಲ್ಲಿ ತೋರಿಸಿ ಉಚಿತ ಟಿಕೆಟ್ ತೆಗೆದುಕೊಳ್ಳುವ ಮೂಲಕ ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ವಿ.ಎಸ್.ಹಾಲಮೂರ್ತಿರಾವ್, ಡಿಪೋ ಮ್ಯಾನೇಜರ್ ವಿನಾಯಕ ಸಾಲಿಮಠ್, ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಕಾರ್ಯನಿರ್ವಾಣಾಧಿಕಾರಿ ಕೆ.ಆರ್.ಪ್ರಕಾಶ್, ಮುಖಂಡರಾದ ಕಂಚಿಕೇರಿ ಜಯಲಕ್ಷ್ಮಿ, ಗುಂಡಗತ್ತಿ ನೇತ್ರಾವತಿ, ಲಕ್ಷಿ ಚಂದ್ರಶೇಖರ್, ಉಮಾ ಶಂಕರ್, ಗೊಂಗಡಿ ಸಹನ, ಕವಿತ ಸುರೇಶ್, ಎ.ಜಾವೀದ್. ಸಾಸ್ವಿಹಳ್ಳಿ ನಾಗರಾಜ್, ಮತ್ತೂರು ಬಸವರಾಜ್, ಸನಾಉಲ್ಲಾ ಸೇರಿದಂತೆ ಇತರರು ಇದ್ದರು.