ಹರಪನಹಳ್ಳಿ, ಏ.16- ತಾಲ್ಲೂಕಿನ ಹಲುವಾಗಲು ಗ್ರಾಮದ, ಪಟ್ಟಣದ ಪ್ರಸಿದ್ಧ ವೈದ್ಯರಾದ ಮಲ್ಕಪ್ಪ ಅಧಿಕಾರ್ ಅವರ ಕುಟುಂಬ ಬಿಜೆಪಿ ಶಾಸಕ ಜಿ. ಕರುಣಾಕರ ರೆಡ್ಡಿ ಅವರ ಆಡಳಿತ ವೈಖರಿಗೆ ಬೇಸತ್ತು ಕುಟುಂಬ ಸಮೇತ ಬಿಜೆಪಿಯಿಂದ ಹೊರ ಬಂದಿದ್ದಾರೆ.
ಈ ಕುರಿತು ಪಟ್ಟಣದ ತಮ್ಮ ಗೊರವಿನ ತೋಟದ ತಮ್ಮ ಆಸ್ಪತ್ರೆಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಲುವಾಗಲು, ಗರ್ಭಗುಡಿ, ಕಡತಿ, ನಂದ್ಯಾಲ, ಇ. ಬೇವಿನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಿಗೆ ಅಭಿವೃದ್ಧಿ ಆಗದೇ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ನಾವುಗಳು ಬಿಜೆಪಿಯಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ ಎಂದರು.
ಶಾಸಕರು ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಳೆದ ಐದು ವರ್ಷ ಅವರ ಏಕ ನಿರ್ಣಯ ದಿಂದ ಕಾರ್ಯಕರ್ತರನ್ನು ಕಡೆಗಣಿಸಿ ಅಭಿವೃದ್ಧಿಗೆ ಹಿನ್ನಡೆ ಮಾಡಿದ್ದಾರೆ. ಪಕ್ಕದ ತಾಲ್ಲೂಕಿನ ಬಿಜೆಪಿ ಶಾಸಕರು ಹೆಚ್ಚು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ ಶಾಸಕರಾಗಿ, ಮಂತ್ರಿಯಾಗಿ ಅನುಭವ ಇರುವವರೇ ಈ ರೀತಿ ಅಭಿವೃದ್ಧಿಗೆ ಹಿನ್ನಡೆ ಮಾಡಿದರೆ ಕ್ಷೇತ್ರ ಅಭಿವೃದ್ಧಿಯಾಗುವುದಾದರೂ ಹೇಗೆ ಎಂದರು.
ಈ ಹಿನ್ನೆಲೆಯಲ್ಲಿ ಮುಂದೆ ತಾಲ್ಲೂಕಿನ ಇಚ್ಛಾಶಕ್ತಿಗೆ ಒತ್ತು ನೀಡುವ ಶಾಸಕರು ಬೇಕಾಗಿದ್ದು, ಹಾಗಾಗಿ ನಾವು ನಮ್ಮ ಮುಂದಿನ ನಡೆ ಯಾವ ಪಕ್ಷಕ್ಕೆ ಸೇರಬೇಕೆಂಬುವುದನ್ನು ನಮ್ಮ ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳತ್ತೇವೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೊಟ್ರಮ್ಮ ಅಧಿಕಾರ್, ಡಾ. ರಘು ಅಧಿಕಾರ್, ರವಿ ಅಧಿಕಾರ್, ಡಾ. ಸೀಮಾ ಅಧಿಕಾರ್, ಡಾ.ಪ್ರಿಯಾಂಕ ಅಧಿಕಾರ್ ಸೇರಿದಂತೆ ಇತರರು ಇದ್ದರು.