ಫೈನಾನ್ಸ್ ಕಂಪನಿಗಳು ಒತ್ತಡದಿಂದ ಹಣ ವಸೂಲಿ ಮಾಡಿದರೆ ಕ್ರಮ

ಜಗಳೂರು, ಸೆ. 28- ಕೊರೊನಾ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳು ಒತ್ತಡದಿಂದ ಹಣ ವಸೂಲಿ ಮಾಡಲು ಯತ್ನಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ತಿಳಿಸಿದರು.

ಜಗಳೂರು ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಫೈನಾನ್ಸ್ ಹಾವಳಿ ಹೆಚ್ಚಾಗಿರುವ ವಿಚಾರವಾಗಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೊರೊನಾ ರೋಗ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ರೈತರು, ಕೂಲಿ ಕಾರ್ಮಿಕರು ಜೀವನ ನಿರ್ವಹಣೆ ಮಾಡುವುದು ಬಹಳ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಸಾಲ ನೀಡಿರುವ ಫೈನಾನ್ಸ್ ಕಂಪನಿಯ ಸಿಬ್ಬಂದಿಗಳು ರೈತರ ಮನೆ ಬಾಗಿಲಿಗೆ ಹೋಗಿ ಒತ್ತಾಯದಿಂದ ಹಣ ವಸೂಲಿ ಮಾಡುತ್ತಿರುವುದು ತಿಳಿದು ಬಂದಲ್ಲಿ ಅಂತಹ ಫೈನಾನ್ಸ್ ಕಂಪನಿಗಳ ವಿರುದ್ಧ ಕೇಸ್ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾಲ ಪಡೆದ ರೈತರು ಸ್ವ ಇಚ್ಛೆಯಿಂದ ಹಣ ಕಟ್ಟಲು ಮುಂದಾದರೆ ಕಟ್ಟಿಸಿಕೊಳ್ಳಿ. ಬಲವಂತವಾಗಿ ದೌರ್ಜನ್ಯದಿಂದ ಹಣ ವಸೂಲಿಗೆ ಮುಂದಾಗಬಾರದು. ಮಾನಸಿಕ ಕಿರುಕುಳ ನೀಡಿದರೆ ಕೇಸು ದಾಖಲು ಮಾಡಲಾಗುವುದು ಎಂದರು.

ಸಭೆಯಲ್ಲಿ ತಾಲ್ಲೂಕು ದಂಡಾಧಿಕಾರಿ ಡಾ. ನಾಗವೇಣಿ, ಸಿಪಿಐ ದುರುಗಪ್ಪ, ತಾಲ್ಲೂಕಿನ ವಿವಿಧ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!