ಮಲೇಬೆನ್ನೂರು, ಆ.12- ಬುಧವಾರ ಮಲೇಬೆನ್ನೂರು ಹೋಬಳಿಯಲ್ಲಿ 37 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಹಾಲಿವಾಣ ಗ್ರಾಮವೊಂದರಲ್ಲಿಯೇ 27 ಜನರಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಗ್ರಾಮಸ್ಥರ ನಿದ್ದೆಗೆಡಿಸಿದೆ.
ಆಗಸ್ಟ್ 6 ರಂದು ಗ್ರಾಮದಲ್ಲಿ 112 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅವುಗಳ ವರದಿ ಬುಧವಾರ ಬೆಳಿಗ್ಗೆ ಬಂದಿದ್ದು, ಕೊರೊನಾ ಪಾಸಿಟಿವ್ ಬಂದಿರುವವರು ನಾವು ಆರಾಮಾಗಿದ್ದೇವೆ. ನಮಗೆ ಏನೂ ತೊಂದರೆ ಇಲ್ಲ. ನಾವು ಮನೆಯಲ್ಲೇ ಇದ್ದು, ನೀವು ನೀಡುವ ಚಿಕಿತ್ಸೆ, ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆಂದು ಗ್ರಾಮಕ್ಕೆ ಭೇಟಿ ನೀಡಿದ ಉಪತಹಶೀಲ್ದಾರ್ ಆರ್.ರವಿ, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಅವರಲ್ಲಿ ಕೇಳಿಕೊಂಡರು.
ಆಗ ಅಧಿಕಾರಿಗಳು ಗ್ರಾ.ಪಂ. ಕಚೇರಿಯಲ್ಲಿ ಗ್ರಾಮದ ಮುಖಂಡರ ಸಭೆ ನಡೆಸಿ, ಸೋಂಕಿತರ ಮನವೊಲಿಸಿ, ಕೋವಿಡ್ ಕೇರ್ ಸೆಂಟರ್ಗೆ ಕರೆದುಕೊಂಡು ಹೋಗಲು ತೀರ್ಮಾನಿಸಿ, ನಂತರ ಮನೆ-ಮನೆಗೆ ತೆರಳಿ ತಿಳಿಹೇಳಿ, ಆಸ್ಪತ್ರೆಗೆ ಶಿಫ್ಟ್ ಮಾಡುವ ಹೊತ್ತಿಗೆ ಸಂಜೆ 7 ಗಂಟೆ ಆಗಿತ್ತು.
ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಗ್ರಾಪಂ. ಮಾಜಿ ಅಧ್ಯಕ್ಷರಾದ ಎಸ್.ಜಿ.ಸಿದ್ದಪ್ಪ, ಜಿ.ಹನುಮಂತಪ್ಪ, ಪಿಡಿಒ ಕೆ.ಎಸ್.ರಮೇಶ್, ಬಿಲ್ ಕಲೆಕ್ಟರ್ ರೇವಣಪ್ಪ, ಗ್ರಾಮ ಲೆಕ್ಕಾಧಿಕಾರಿ ರಾಮಕೃಷ್ಣ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ವೇಳೆ ಹಾಜರಿದ್ದರು. ಗುರುವಾರ ಇನ್ನೂ 58 ಜನರ ಕೊರೊನಾ ಟೆಸ್ಟ್ ವರದಿ ಬರಲಿದ್ದು, ಆ ವರದಿಯತ್ತ ಜನರ ಕಾತುರ ಹೆಚ್ಚಾಗಿದೆ.
ಅಲ್ಲದೇ ಹೊಳೆಸಿರಿಗೆರೆ ಗ್ರಾಮದಲ್ಲಿ ಇಂದು ಇಬ್ಬರಿಗೆ, ಉಕ್ಕಡಗಾತ್ರಿಯಲ್ಲಿ ನಾಲ್ವರಿಗೆ, ಬಿಳಸನೂರು, ಯಲವಟ್ಟಿ, ಹರಳಹಳ್ಳಿ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದ್ದು, ಇವರೆಲ್ಲರನ್ನೂ ಕೋವಿಡ್ ಕೇರ್ ಸೆಂಟರ್ಗೆ ಕರೆದೊಯ್ಯಲಾಗಿದೆ.
ಮಲೇಬೆನ್ನೂರು ಪುರಸಭೆಯ ಸಮುದಾಯ ಸಂಘಟನಾಧಿಕಾರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಪುರಸಭೆ ಕಚೇರಿಯನ್ನು ಸ್ಯಾನಿಟೈಸ್ ಮಾಡಿಸಿ, 2 ದಿನಗಳ ಮಟ್ಟಿಗೆ ಸೀಲ್ಡೌನ್ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ತಿಳಿಸಿದ್ದಾರೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುವುದೆಂದರು.
ಗರ್ಭಿಣಿಯರಿಗೆ ಪಾಸಿಟಿವ್ : ಮಲೆಬೇನ್ನೂರು ಪಟ್ಟಣದಲ್ಲಿ ನಿನ್ನೆ ಮತ್ತೆ 2 ಕೊರೊನಾ ಪಾಸಿಟಿವ್ ದೃಢಪಟ್ಟಿವೆ.
9ನೇ ವಾರ್ಡ್ನ ಇಂದಿರಾನಗರದ 24 ವರ್ಷದ ಗರ್ಭಿಣಿ ಮತ್ತು 23ನೇ ವಾರ್ಡ್ನ ಆಶ್ರಯ ಕಾಲೋನಿಯ 25 ವರ್ಷದ ಗರ್ಭಿಣಿಗೆ ಸೋಂಕು ಕಾಣಿಸಿಕೊಂಡಿದೆ.
ಕುಂಬಳೂರು ಗ್ರಾಮದಲ್ಲಿ 45 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದೆ.