ದಿನಕ್ಕೆ 100 ಜನರಿಗೆ ಲಸಿಕೆ, 30 ನಿಮಿಷ ನಿಗಾ

ನವದೆಹಲಿ, ಡಿ. 14 – ದಿನವೊಂದಕ್ಕೆ 100-200 ಜನರಿಗೆ ಕೊರೊನಾ ಲಸಿಕೆ ನೀಡುವುದು, ಲಸಿಕೆ ನಂತರ 30 ನಿಮಿಷಗಳವರೆಗೆ ನಿಗಾ ಹಾಗೂ ಒಂದು ಸಮಯಕ್ಕೆ ಒಬ್ಬರಿಗೆ ಮಾತ್ರ ಲಸಿಕೆ ನೀಡುವುದೂ ಸೇರಿದಂತೆ ಹಲವಾರು ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ಪ್ರಕಾರ, ಲಸಿಕೆಯ ಫಲಾನುಭವಿಗಳನ್ನು ಗುರುತಿಸಲು ಕೋವಿಡ್ ವ್ಯಾಕ್ಸಿನ್ ಇಂಟಲಿಜೆನ್ಸ್ ನೆಟ್‌ವರ್ಕ್ (ಕೊ-ವಿನ್) ತಂತ್ರಾಂಶ ಬಳಸಲಾಗುವುದು.

ಲಸಿಕೆ ಪಡೆಯಲು ಮೊದಲೇ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಹಲವು ಲಸಿಕೆಗಳು ಮಿಶ್ರಣವಾಗುವುದನ್ನು ತಪ್ಪಿಸಲು, ಜಿಲ್ಲೆಯೊಂದಕ್ಕೆ ಒಂದೇ ಕಂಪನಿ ಉತ್ಪಾದಿತ ಲಸಿಕೆ ನೀಡಬೇಕೆಂದು ರಾಜ್ಯಗಳಿಗೆ ತಿಳಿಸಲಾಗಿದೆ.

ಲಸಿಕೆಗಳನ್ನು ಶೀತಲೀಕರಣ ಉಪಕರಣ ಗಳಲ್ಲಿ ನಿರಂತರವಾಗಿ ಇರಿಸಬೇಕು. ಬಳಕೆಯಾದ ಲಸಿಕೆಗಳನ್ನು ಶೀತಲ ಘಟಕಗಳಿಗೆ ರವಾನಿಸಬೇಕು ಎಂದು ತಿಳಿಸಲಾಗಿದೆ.

ಲಸಿಕೆ ನೀಡುವ ಪ್ರತಿ ತಂಡದಲ್ಲಿ ಐವರಿ ರುತ್ತಾರೆ. ಈ ತಂಡ ದಿನಕ್ಕೆ 100 ಫಲಾನುಭವಿಗಳಿಗೆ ಲಸಿಕೆ ನೀಡಲಿದೆ. ಸೂಕ್ತ ಸೌಲಭ್ಯಗಳಿದ್ದರೆ ಪ್ರತಿ ದಿನಕ್ಕೆ 200 ಜನರವರೆಗೂ ಲಸಿಕೆ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ 12 ಗುರುತಿನ ಚೀಟಿಗಳನ್ನು ಕೊ – ವಿನ್ ವೆಬ್ ತಾಣದಲ್ಲಿ ನೋಂದಣಿಗಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಲಸಿಕೆ ನೀಡುವಾಗ ಹಲವಾರು ಸವಾಲುಗಳು ಎದುರಾಗುತ್ತವೆ. ಲಸಿಕೆ ಜಾರಿಯ ಪ್ರಗತಿ ಹಾಗೂ ಅದರ ಲಾಭಗಳ ಕುರಿತು ದೇಶದ ಜನರಿಗೆ ಮಾಹಿತಿ ನೀಡಬೇಕು. ಅಲ್ಪಾವಧಿಯಲ್ಲಿ ಲಸಿಕೆ ರೂಪುಗೊಳಿಸಿ ನೀಡುತ್ತಿರುವ ಬಗ್ಗೆ ಇರುವ ಸುರಕ್ಷತಾ ಕಳವಳಗಳನ್ನು ನಿವಾರಿಸಬೇಕು. ಗಾಳಿ ಸುದ್ದಿ ಹಾಗೂ ಮಾಧ್ಯಮಗಳ ಮೂಲಕ ಬರುವ ನಕಾರಾತ್ಮಕ ವರದಿಗಳಿಂದ ತಪ್ಪು ಕಲ್ಪನೆ ಉಂಟಾಗುವುದನ್ನು ತಡೆಯಬೇಕು ಎಂದು ತಿಳಿಸಲಾಗಿದೆ.

error: Content is protected !!