ಕಮ್ಯೂನಿಸ್ಟ್ ಪಕ್ಷದ ಸಿದ್ಧಾಂತ ಒಪ್ಪುವವರಿಗೆ ಪಂಚಾಯ್ತಿ ಚುನಾವಣೆಯಲ್ಲಿ ಬೆಂಬಲ

ದಾವಣಗೆರೆ, ಡಿ.10- ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು, ಬಿಜೆಪಿ ಹೊರತುಪಡಿಸಿ ಪಕ್ಷದ ಸಿದ್ಧಾಂತ ಒಪ್ಪಿಕೊಳ್ಳುವವರನ್ನು ಬೆಂಬಲಿಸುವಂತೆ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಗುರುವಾರ ಗ್ರಾಮ ಪಂಚಾಯ್ತಿ ಚುನಾವಣಾ ತಯಾರಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕರು ಹಾಗೂ ಆಡಳಿತ ಶಾಹಿ ವರ್ಗವು ಗ್ರಾಮ ಪಂಚಾಯ್ತಿ ಹಾಗೂ ಗ್ರಾಮ ಸಭೆಗಳಿಗಿದ್ದ ಸಂವಿಧಾನ ಬದ್ಧ ಹಕ್ಕುಗಳನ್ನು ಮೊಟಕುಗೊಳಿಸಲು ಹೊರಟಿವೆ. ನಾವು ಗ್ರಾಮ ಪಂಚಾಯ್ತಿಗೆ ಇರುವ ಅಧಿಕಾರವನ್ನು ಜನತೆಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಹಿಂದೆಂದೂ ಕಾಣದ ಸುದೀರ್ಘ ಹಾಗೂ ವ್ಯವಸ್ಥಿತ ಹೋರಾಟ ನಡೆಯುತ್ತಿರುವಾಗಲೇ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದೆ. ಈ ವೇಳೆ ಜನತೆಗೆ ಕೇಂದ್ರ ಸರ್ಕಾರದ ಜನ ವಿರೋಧಿ ಧೋರಣೆಗಳನ್ನು ತಿಳಿಸಬೇಕು ಎಂದರು.

ಅಧಿಕಾರ ವಿಕೇಂದ್ರೀಕರಣವಾಗುವ ಬದಲು ಪಂಚಾಯ್ತಿಗಳಲ್ಲಿ ಭ್ರಷ್ಟಾಚಾರ ವಿಕೇಂದ್ರೀಕರಣವಾಗುತ್ತಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷರೂ, ಸದಸ್ಯರಿಗೂ ಪರ್ಸೆಂಟೇಜ್ ಆಮಿಷ ತೋರಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗುವಂತೆ ಶಾಸಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಸಿಪಿಐ ಜಿಲ್ಲಾ ಮಂಡಳಿ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ರಾಮಚಂದ್ರಪ್ಪ ಮಾತನಾಡುತ್ತಾ, ಜನರಿಗಾಗಿ ನಾವು ಕೆಲಸ ಮಾಡಬೇಕೇ ಹೊರತು, ನಮಗಾಗಿ ಅಲ್ಲ.  ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಮ್ಮ ಪಕ್ಷ ಬೆಂಬಲಿತ ಹತ್ತು ಸ್ಪರ್ಧಿಗಳಲ್ಲಿ ಒಬ್ಬರು ಗೆದ್ದರೂ ಸಾಕು ಎಂದು ಹೇಳಿದರು.

ಸಿಪಿಐ ಜಿಲ್ಲಾ ಮಂಡಳಿ ಖಜಾಂಚಿ ಆನಂದ್ ರಾಜ್, ಸಹ ಕಾರ್ಯದರ್ಶಿ ಆವರಗೆರೆ ಚಂದ್ರು, ಹೆಚ್.ಜಿ. ಉಮೇಶ್, ಎಂ.ಬಿ. ಶಾರದಮ್ಮ, ಆವರಗೆರೆ ವಾಸು, ಮಹಮದ್ ಭಾಷಾ, ಟಿ.ಎಸ್. ನಾಗರಾಜ್, ಮಹಮದ್ ರಫಿ, ಟಿ.ಹೆಚ್. ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು

error: Content is protected !!