ಜೆಡಿಎಸ್ ಸಂಘಟಿತವಾದರೆ 24 ಗ್ರಾ.ಪಂ. ಗಳ ಚುಕ್ಕಾಣಿ

ಹರಿಹರ, ಡಿ.3- ಜೆಡಿಎಸ್ ಪಕ್ಷದಲ್ಲಿ ಶಕ್ತಿಯಿದೆ. ಸಂಘಟನೆಯಲ್ಲೂ ಜಾಗೃತಿ ವಹಿಸಿದರೆ  ಕ್ಷೇತ್ರದ 24 ಗ್ರಾಮ ಪಂಚಾಯ್ತಿಗಳಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು.

ನಗರದ ರಾಘವೇಂದ್ರಸ್ವಾಮಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾ.ಪಂ. ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ಗ್ರಾ.ಪಂ. ಚುನಾವಣೆ ಭದ್ರ ಬುನಾದಿ ಆಗುವುದರಿಂದ ಪಕ್ಷವನ್ನು ತಳ ಹಂತದಿಂದ ಬಲಗೊಳಿಸ ಬೇಕಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮಲ್ಲಿ ಯಾವುದೇ ವೈಮನಸ್ಸುಗಳಿದ್ದರೂ   ಬದಿಗೆ ಸರಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿಯನ್ನು ಮಾಡಿದ್ದರೂ  ನಾನು ಸೋಲಬೇಕಾಗಿ ಬಂತು. ಅಲ್ಪಸಂಖ್ಯಾತ ಜನಾಂಗದವರು  ಈಗ ಮತ್ತೆ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ 14 ಸದಸ್ಯರು ಗೆಲ್ಲುವ ಮೂಲಕ ಮತ್ತೆ ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆ ಎಷ್ಟು ಇದೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅದೇ ನಿಟ್ಟಿನಲ್ಲಿ ಗ್ರಾ.ಪಂ. ಚುನಾವಣೆಯನ್ನೂ ಸಹ  ಸವಾಲಾಗಿ ಸ್ವೀಕರಿಸುವ ಅಗತ್ಯವಿದೆ ಎಂದರು.

ಕ್ಷೇತ್ರದ ಹಾಲಿ ಶಾಸಕರು ತಮ್ಮ ಎರಡೂವರೆ ವರ್ಷಗಳ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಸುಳ್ಳು ಆಶ್ವಾಸನೆ ನೀಡುವುದರಲ್ಲಿಯೇ ಕಾಲ ಕಳೆದಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ  ಭ್ರಷ್ಠಾಚಾರ ತಾಂಡವವಾಡುತ್ತಿದೆ.  ಕುಮಾರನಹಳ್ಳಿ ಕೆರೆ ಮತ್ತು ಬೈರನ ಪಾದ ನೀರಿನ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ ಎಂದು ಟೀಕಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನನಗೆ ಅವಕಾಶ ಸಿಗಲಿಲ್ಲ ಎಂದು ಮುನಿಸಿಕೊಂಡು ಪಕ್ಷದ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಲು ಹೋಗಬಾರದು. ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಅರಿವನ್ನು ಹೊಂದಿ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು. ನಮ್ಮ ಪಕ್ಷವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ನಾವು ಅಧಿಕಾರಕ್ಕೆ ಬರುವುದಕ್ಕೆ ದಾರಿ ಸುಗಮವಾಗುತ್ತದೆ ಎಂದು ಹೇಳಿದರು.

ತಾ.ಪಂ. ಸದಸ್ಯ ಸಿರಿಗೆರೆ ಕೊಟ್ರೇಶಪ್ಪ, ಯಲವಟ್ಟಿ ಅನಂತ್ ನಾಯ್ಕ್ ಮಾತನಾಡಿ ಪಕ್ಷದಲ್ಲಿ ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು. ಪಕ್ಷದ ಬಲವರ್ಧನೆಗೆ ಸಹಕಾರಿ ಆಗುತ್ತದೆ ಎಂದು ಹೇಳಿದರು. ಚಂದ್ರಪ್ಪ ಮಿಟ್ಲಕಟ್ಟೆ, ಎ.ಕೆ. ನಾಗಪ್ಪ, ತಾ.ಪಂ. ಸದಸ್ಯ ಕೊಟ್ರೇಶ್ ಗೌಡ್ರು ಮಾತನಾಡಿದರು.

ಗ್ರಾಮಾಂತರ ಘಟಕದ ಅಧ್ಯಕ್ಷ ಬಂಡೇರ್ ತಿಮ್ಮಣ್ಣ, ಡಿ.ಎಂ. ಹಾಲಸ್ವಾಮಿ, ವೀರಣ್ಣ ಗೌಡ್ರು, ರಾಜಣ್ಣ ನಂದಿತಾವರೆ, ವಾಸನ ರುದ್ರಪ್ಪ ಎಪಿಎಂಸಿ, ಜಿ.ಪಂ. ಸದಸ್ಯೆ ಹೇಮಾವತಿ , ಜಿಗಳಿ ಬಸವನಗೌಡ್ರು, ಹೆಚ್. ಎಸ್. ಅರವಿಂದ್, ದೀಟೂರು ಶೇಖರಪ್ಪ, ಸುರೇಶ್ ಹಾದಿಮನಿ, ತಮ್ಮಣ್ಣ, ಹಿರೇಗೌಡ್ರು ವಾಸನ, ಶಿವಣ್ಣ ಕುಂಬಳೂರು, ಸಂಜೀವಪ್ಪ ನಿಟ್ಟೂರು, ಹುಗ್ಗಿ ಅಡಿವೇಶ್, ಡಿ. ಉಜ್ಜೇಶ್, ಅಂಗಡಿ ಮಂಜುನಾಥ್,  ನಗರಸಭೆ ಸದಸ್ಯ ಜಂಬಣ್ಣ ಗುತ್ತೂರು, ನಿಂಗಪ್ಪ ಭಾನುವಳ್ಳಿ, ರಾಗಿಣಿ ಹರ್ಲಾಪುರ, ಲತಾ ಕೊಟ್ರೇಶ್, ಕುಮಾರ್ ಅಡಿಕಿ, ಅಮರಾವತಿ ನಾಗರಾಜ್, ಬೇವಿನಹಳ್ಳಿ ಬಸೆಟ್ಟಪ್ಪ ಹಾಗೂ ಇನ್ನಿತರರಿದ್ದರು.

error: Content is protected !!