ದಾವಣಗೆರೆ, ಅ.27- ಭಾರತದ ಸನಾತನ ಅಧ್ಯಾತ್ಮ ಸಾಹಿತ್ಯದಲ್ಲಿ ವಿಜ್ಞಾನದಿಂದಲೂ ಭೇದಿಸಲಾಗದ, ಅರಿಯಲಾಗದ ಸತ್ಯಗಳ ಜ್ಞಾನಾರ್ಜನೆಗೆ ಮಾರ್ಗಗಳಿದ್ದು, ಇದು ಕೇವಲ ಪಠಣ, ವಾಚನ, ಶ್ರವಣದಿಂದಷ್ಟೇ ಸಾಧ್ಯವಿಲ್ಲ, ಧ್ಯಾನದಿಂದ ಸಾಧ್ಯವಿದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಅಮೃತೇಶ್ವರೀ ಅಷ್ಟಾಂಗ ಯೋಗ ಕೇಂದ್ರ ಹಾಗೂ ಅಮೃತ ವಿದ್ಯಾಲಯಂ ಸಂಯುಕ್ತಾಶ್ರಯದಲ್ಲಿ `ಜಾಗತಿಕ ಶಾಂತಿ ಹಾಗೂ ಸಮಸ್ತ ಆರೋಗ್ಯ ಪ್ರಾಪ್ತಿಗಾಗಿ’ ಏರ್ಪಡಿಸಲಾಗಿದ್ದ ಸೂರ್ಯ ನಮಸ್ಕಾರ, ಶ್ರೀ ಮೃತ್ಯುಂಜಯ ಹೋಮದ ಅಂಗವಾಗಿ `ಮಹಾ ಮೃತ್ಯುಂಜಯ ಮಂತ್ರ ಮಹತ್ವ’ ವಿಷಯವಾಗಿ ಅವರು ವಿಶೇಷ ಉಪನ್ಯಾಸ ನೀಡಿದರು.
ಯಾವುದೇ ವೇದ ಮಂತ್ರಗಳ ಅರ್ಥವನ್ನು ನಿಘಂಟು ನೋಡುತ್ತಾ ಅರ್ಥೈಸಿಕೊಂಡರೆ ಲಘುವಾಗಿ ಕಾಣು ತ್ತದೆ. ಆದರೆ, ಅದನ್ನೇ ನಮ್ಮ ಆಲೋಚನಾ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ವಿಶ್ಲೇಷಿಸುತ್ತಾ ಹೋದರೆ ಪ್ರಕೃತಿಯಿಂದ ಪರಮಾತ್ಮನವರೆಗಿನ ಅನೇಕ ಸತ್ಯಗಳ ಅರಿವು ನಮಗೆ ಅರಿವಾಗುತ್ತಾ ಬರುತ್ತದೆ, ಇದೂ ಒಂದು ರೀತಿಯ ಧ್ಯಾನ ಎಂದರು.
ದೇವಋಷಿ ವಶಿಷ್ಟರು ದೃಷ್ಟಾರರಾಗಿರುವ ಅನುಷ್ಟುಪ್ ಛಂದಸ್ಸಿನಲ್ಲಿರುವ ಮೃತ್ಯುಂಜಯ ಮಹಾಮಂತ್ರದಲ್ಲಿ ಬೇಡುವ ಅಮೃತತ್ವ ಏನು, ಹೇಗೆ ಎಂಬುದನ್ನು ಮಂಜುನಾಥ್ ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು.
ಅಮೃತ ವಿದ್ಯಾಲಯದಲ್ಲಿ ಸಾಮಾಜಿಕ ಅಂತರದೊಂದಿಗೆ ನಡೆದ ಸರಳ ಕಾರ್ಯಕ್ರಮದ ದಿವ್ಯ ಉಪಸ್ಥಿತಿಯನ್ನು ಪ್ರಾಂಶುಪಾಲರಾದ ಬ್ರ. ಆರಾಧನಾಮೃತ ಚೈತನ್ಯರು ವಹಿಸಿದ್ದರು. ಅಮೃತೇಶ್ವರಿ ಅಷ್ಟಾಂಗ ಯೋಗ ಕೇಂದ್ರದ ಕಣ್ವಕುಪ್ಪಿ ಕರಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.