ನಿಟ್ಟೂರಿನಲ್ಲಿದ್ದ ಹನಗವಾಡಿಯ ಸೋಂಕಿತ ವೃದ್ಧ
ಮಲೇಬೆನ್ನೂರು, ಜು.19- ಭಾನುವಾರ ಮಲೇಬೆನ್ನೂರು ಹೋಬಳಿಯಲ್ಲಿ 5 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.ಯಲವಟ್ಟಿಯಲ್ಲಿ ನಾಲ್ವರಿಗೆ, ಎರೇಬೂದಿಹಾಳ್ ಗ್ರಾಮದಲ್ಲಿ ಒಬ್ಬರಿಗೆ ಮತ್ತು ಹನಗವಾಡಿ ಗ್ರಾಮದ ವೃದ್ಧರೊಬ್ಬರು ನಿಟ್ಟೂರಿನಲ್ಲಿದ್ದಾಗ ಅವರ ಕೊರೊನಾ ಟೆಸ್ಟ್ ಪಾಸಿಟಿವ್ ಬಂದಿದೆ.
ಯಲವಟ್ಟಿ : ಗ್ರಾಮದ 66 ವರ್ಷದ ವೃದ್ಧರೊಬ್ಬರು ಅನಾರೋಗ್ಯದ ಕಾರಣ 18 ದಿನಗಳ ಹಿಂದೆ ಮಣಿಪಾಲ ಕಸ್ತೂರಿಬಾ ಆಸ್ಪ ತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಯಲವಟ್ಟಿಯಲ್ಲಿರುವ ಅವರ ಮನೆಗಳನ್ನು ಸೀಲ್‌ಡೌನ್ ಮಾಡಿ, ಕುಟುಂಬದವರನ್ನು ಹೋಂ ಕ್ವಾರಂಟೈನ್ ಮಾಡಿ, ಅವರೆಲ್ಲರಿಗೂ ಕೊರೊನಾ ಟೆಸ್ಟ್ ಮಾಡಿದ್ದರು. ಭಾನುವಾರ ಮಧ್ಯಾಹ್ನ ಇವರ ಪರೀಕ್ಷಾ ವರದಿ ಬಂದಿದ್ದು, 59 ವರ್ಷದ, 34 ವರ್ಷದ ಹಾಗೂ 28 ವರ್ಷದ ಮಹಿಳೆಯರಿಗೆ ಮತ್ತು 23 ವರ್ಷದ ಪುರುಷ ಸೇರಿ, ನಾಲ್ವರಿಗೆ ಸೋಂಕು ದೃಢಪ ಟ್ಟಿದೆ. ಕೂಡಲೇ ಇವರ ಪೈಕಿ ಮೂವರನ್ನು ಗುತ್ತೂರಿನಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಮತ್ತು 59 ವರ್ಷದ ಮಹಿಳೆಯನ್ನು ದಾವಣ ಗೆರೆಯ ಸಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ವೇಳೆ ಮಹಿಳೆಯೊಬ್ಬರು ತನ್ನ ಸಣ್ಣ ಮಗುವನ್ನು ಹೇಗೆ ಅಲ್ಲಿಗೆ ಕರೆದೊಯ್ಯಬೇಕೆಂದು ಕಣ್ಣೀರಿಟ್ಟ ಘಟನೆ ನಡೆಯಿತು. ಆಗ ವೈದ್ಯಾಧಿಕಾರಿ ಡಾ. ರೇಖಾ ಅವರು ಮಗು ಹಾಗೂ ನಿಮ್ಮನ್ನು ಪ್ರತ್ಯೇಕವಾಗಿ ಇಟ್ಟು ಆರೈಕೆ ಮಾಡುತ್ತಾರೆ. ಹೆದರಬೇಡಿ ಎಂದು ಅವರಿಗೆ ಧೈರ್ಯ ಹೇಳಿದರು.
ಉಪ ತಹಶೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಸಮೀರ್, ಗ್ರಾ.ಪಂ. ಪಿಡಿಒ ರಾಮನಗೌಡ, ಗ್ರಾಮ ಲೆಕ್ಕಾಧಿಕಾರಿ ಸುಭಾನಿ, ಎಎಸ್ಐ ಬಸವರಾಜ್, ಪೊಲೀಸ್ ಭಂಡಾರಿ, ಆರೋಗ್ಯ ಸಹಾಯಕರಾದ ಭಾಗ್ಯಮ್ಮ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಈ ವೇಳೆ ಹಾಜರಿದ್ದು, ಗ್ರಾಮಸ್ಥರಿಗೆ ಜಾಗೃತಿ ಹೇಳಿದರು.
ನಿಟ್ಟೂರು : ಹನಗವಾಡಿ ಗ್ರಾಮದ 70 ವರ್ಷದ ವೃದ್ಧರೊಬ್ಬರು ಕಳೆದ 5 ದಿನಗಳ ಹಿಂದೆ ಸೀತ, ಕೆಮ್ಮು ಇರುವ ಕಾರಣ, ಹರಿಹರದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು. ಶನಿವಾರ ನಿಟ್ಟೂರಿನಲ್ಲಿರುವ ಪತ್ನಿ ಮನೆಗೆ ಬಂದು ಇಲ್ಲಿಯೇ ಇದ್ದರು. ಭಾನುವಾರ ಅವರ ಪರೀಕ್ಷಾ ವರದಿ ಪಾಸಿಟಿವ್ ಬಂದ ಕಾರಣ, ಅವರನ್ನು ದಾವಣಗೆರೆ ಸಿ.ಜಿ. ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.
ಅವರ ಮನೆಯಲ್ಲಿದ್ದ 90 ವರ್ಷದ ಅಜ್ಜಿ ಸೇರಿ ಮೂವರನ್ನು ಹೋಂ ಕ್ವಾರಂಟೈನ್ ಮಾಡಲಾಯಿತು. ಪಿಎಸ್‌ಐ ವೀರಬಸಪ್ಪ, ಗ್ರಾ.ಪಂ. ಪಿಡಿಒ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್, ಸುಭಾನಿ, ಕಾರ್ಯದರ್ಶಿ ಸೋಮಶೇಖರ್, ದೇವರಬೆಳಕೆರೆ ಆರೋಗ್ಯ ಕೇಂದ್ರದ ಪರಶುರಾಮ್, ಆದರ್ಶ ಸಬೀತಮ್ಮ, ಗ್ರಾಮ ಸಹಾಯಕ ಮಾರುತಿ, ಗ್ರಾ.ಪಂ. ಸಿಬ್ಬಂದಿ ಹಾಲೇಶ್ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಈ ವೇಳೆ ಹಾಜರಿದ್ದರು.
ಬೂದಿಹಾಳ್ : ಗ್ರಾಮದ 28 ವರ್ಷದ ಯುವಕನೊಬ್ಬನಿಗೆ ಕೊರೊನಾ ಸೋಂಕು ತಗುಲಿದ್ದು, ಈತನಿಗೆ ಹೇಗೆ ಸೋಂಕು ತಗುಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈತನ ಜೊತೆ ಮನೆಯಲ್ಲಿದ್ದ 65 ವರ್ಷದ ತಂದೆ, 60 ವರ್ಷದ ತಾಯಿ, ಅಣ್ಣ, ಅಕ್ಕ ಅವರನ್ನು ಹೋಂ ಕ್ವಾರಂಟೈನ್ ಮಾಡಿ, ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ದೇವರಬೆಳಕೆರೆ ಗ್ರಾ.ಪಂ. ಪಿಡಿಒ ಬಿರಾದಾರ್ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ, ಪೊಲೀಸರು ಹಾಜರಿದ್ದರು.