ದಾವಣಗೆರೆ, ಜು.17- ರೈಲ್ವೆ ಖಾಸಗೀಕರಣ ಕೈಬಿಡುವಂತೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಂಚಾಲನ ಸಮಿತಿ ವತಿಯಿಂದ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ನಂತರ ರೈಲ್ವೇ ನಿಲ್ದಾಣದ ಅಧೀಕ್ಷಕರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು, ಕೇಂದ್ರ ಸರ್ಕಾರವು ದೇಶದ ಸಾರ್ವಜನಿಕ ಸಂಪತ್ತುಗಳನ್ನು ಸದ್ದಿಲ್ಲದೆ ಖಾಸಗಿ ಕಂಪನಿಗಳಿಗೆ ಹಾಗೂ ವಿದೇಶಿ ಕಾರ್ಪೊರೇಟ್‍ಗಳಿಗೆ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದೆ. ದೇಶದ ಅತಿ ದೊಡ್ಡ ಸಾರ್ವಜನಿಕ ಉದ್ಯಮವಾದ ಭಾರತೀಯ ರೈಲ್ವೆ ಯನ್ನು ತುಂಡರಿಸಿ ಖಾಸಗೀಕರಣ ಮಾಡಲು ತೀರ್ಮಾನಿಸಿದೆ. ಅದರ ಭಾಗವಾಗಿ ದೇಶದ ಪ್ರತಿಷ್ಟಿತ 109 ರೈಲ್ವೇ ನಿಲ್ದಾಣಗಳನ್ನು ಖಾಸಗಿ ಯವರ ಕೈಗೆ ಒಪ್ಪಿಸಿ ಅವುಗಳ ಮೂಲಕ 151 ಖಾಸಗಿ ರೈಲುಗಳನ್ನು ಓಡಿಸಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗೀಕರಣದಿಂದ ರೈಲ್ವೆಯಲ್ಲಿ ಮಹಿಳೆಯರಿಗೆ, ದಲಿತರಿಗೆ, ವಿಕಲ ಚೇತನರು ಕ್ರೀಡಾಪಟುಗಳಿಗೆ ನೇಮಕಾತಿಗಳಲ್ಲಿ ಸಿಗುತ್ತಿದ್ದ ಎಲ್ಲಾ ರೀತಿಯ ಮೀಸಲಾತಿಗಳು ರದ್ದಾಗಲಿವೆ.
-ಕೆ.ಹೆಚ್. ಆನಂದರಾಜ್, ಜಿಲ್ಲಾ ಸಂಚಾಲಕ, ಸಿಐಟಿಯು
ರೈಲ್ವೆ ಖಾಸಗೀಕರಣ ನೀತಿಗಳಿಂದ ಎಲ್ಲಾ ರೈಲ್ವೆ ಪ್ರಯಾಣಿಕರಿಗೆ ಸಿಗುತ್ತಿದ್ದ ಶೇ. 43ರಷ್ಟು ಸಬ್ಸಿಡಿ ರದ್ದಾಗಲಿದೆ. ಖಾಸಗೀಕರಣ ಪರಿಣಾಮ ವಾಗಿ ನಮ್ಮ ರೈಲ್ವೆ ಕೋಚ್‍ಗಳು, ಗಾಲಿಗಳು ಮತ್ತು ರೈಲ್ವೆ ಕಾರ್ಯಾಗಾರ ಇತ್ಯಾದಿಗಳಿಗೆ ಸರ್ಕಾರ ಉತ್ಪಾದನಾ ಆರ್ಡರ್‍ಗಳನ್ನು ನಿಲ್ಲಿಸು ತ್ತದೆ. ಅವೆಲ್ಲಾ ದೇಶಿಯ ಖಾಸಗಿ ಬಂಡವಾಳಿಗರು ಮತ್ತು ಅಮೇರಿಕಾದ ಜನರಲ್ ಎಲೆಕ್ಟ್ರಿಕಲ್ ನಂತಹ ಕಂಪನಿಗಳ ಪಾಲಾಗುವುದರಿಂದ ಈಗಿರುವ ರೈಲ್ವೆ ಉತ್ಪಾದನಾ ಘಟಕಗಳು ಮುಚ್ಚಿ ಅಲ್ಲಿರುವ ಸಾವಿರಾರು ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ.
ಖಾಯಂ ನೌಕರರ ಸ್ಥಾನಗಳಲ್ಲಿ ಅವಧಿ ಕೆಲಸಗಾರರು, ಟ್ರೈನೀಸ್, ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡು ಖಾಸಗಿಯವರು ವಿಪರೀತ ಲಾಭ ಮಾಡಿಕೊಳ್ಳಲಿದ್ದಾರೆ ಎಂದು ಆಕ್ಷೇಪಿಸಿದರು.
ಪ್ರತಿಭಟನೆಯಲ್ಲಿ ತಿಮ್ಮಣ್ಣ ಹೊನ್ನೂರು, ಎ. ಗುಡ್ಡಪ್ಪ, ಜಯನಾಯ್ಕ, ಬಾಡಾ ಶ್ರೀನಿವಾಸ್, ತಿಮ್ಮಾರೆಡ್ಡಿ, ಹಾಲೇಶನಾಯ್ಕ, ರವಿ, ಏಕಾಂತಪ್ಪ, ಹನುಮಂತನಾಯ್ಕ, ಜಯ್ಯಣ್ಣ ಜಾಧವ್, ಹೆಚ್.ಎಸ್. ಹಿರೇಮಠ, ಕರಿಬಸಪ್ಪ, ಎ.ಎಂ. ರುದ್ರಸ್ವಾಮಿ, ಲಕ್ಷ್ಮಣನಾಯ್ಕ, ಅನಂತರಾಜ್ ಪಾಲ್ಗೊಂಡಿದ್ದರು.