ದಾವಣಗೆರೆ, ಜು. 11- ಕೊರೊನಾ ನಿಯಂತ್ರಣದ ಸಮಯದಲ್ಲಿ ರಾಜ್ಯ ಸರ್ಕಾರ ಅಂದಾಜು 2,189 ಕೋಟಿ ರೂ.ಗಳಷ್ಟು ಅವ್ಯವಹಾರ ನಡೆಸಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಆರೋಪಿಸಿದ್ದಾರೆ.
ನಿನ್ನೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೆಂಟಿಲೇಟರ್, ಎನ್-95 ಮುಖಗವಸು, ಪಿಪಿಇ ಕಿಟ್, ಕೋವಿಡ್ ಪರೀಕ್ಷೆ ಗ್ಲೌಸ್, ಸರ್ಜಿಕಲ್ ಗ್ಲೌಸ್, ಆಕ್ಸಿಜನ್ ಸಿಲಿಂಡರ್ ಖರೀದಿಗಾಗಿ ಮತ್ತು ಕೋವಿಡ್ ಪರೀಕ್ಷೆ, ಸೋಂಕಿತರ ಚಿಕಿತ್ಸೆಗಾಗಿ ಹಾಗೂ ಇತರೆ ಖರ್ಚುಗಳಿಗಾಗಿ 3,287 ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದು, ಅದರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದರು.
ಸೋಂಕು ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರ್ಕಾರ ಹಣ ಲೂಟಿ ಮಾಡುತ್ತಿದೆ. ಸರ್ಕಾರ ಖರೀದಿಸಿರುವ ವೈದ್ಯಕೀಯ ಉಪಕರಣಗಳಿಗೆ ಹೆಚ್ಚು ಮೊತ್ತ ತೋರಿಸುವ ಮೂಲಕ ಜನರ ತೆರಿಗೆ ಹಣವನ್ನು ಕೊಳ್ಳೆ ಹೊಡೆದಿದೆ. ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹೈಕೋರ್ಟ್ನ ನ್ಯಾಯಮೂರ್ತಿಗಳಿಂದ ಅಥವಾ ವಿಧಾನ ಮಂಡಲದ ಜಂಟಿ ಸದನ ಸಮಿತಿಯಿಂದ ತನಿಖೆ ಮಾಡಿಸುವ ಮೂಲಕ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕೆಂದು ಬಸವರಾಜ್ ಒತ್ತಾಯಿಸಿದರು.
ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವೇ ಮುಖ್ಯ ಕಾರಣ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೀಸಲು ಇಟ್ಟಿರುವ ಅನುದಾನ ಎಷ್ಟು? ಅದರಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಮಾಡಿರುವ ಖರ್ಚು ಎಷ್ಟು? ಸೀಲ್ಡೌನ್ ಮತ್ತು ಲಾಕ್ಡೌನ್ಗಳಿಗಾಗಿ ಮಾಡಿರುವ ವೆಚ್ಚ ಎಷ್ಟು? ಎಂಬುದರ ಬಗ್ಗೆ ತಕ್ಷಣವೇ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ದೇವರಮನಿ ಶಿವಕುಮಾರ್, ಮಂಜುನಾಥ್ ಗಡಿಗುಡಾಳ್, ಮುಖಂಡರಾದ ಕೆ.ಎಲ್. ಹರೀಶ್ ಬಸಾಪುರ, ರಾಘವೇಂದ್ರಗೌಡ್ರು, ಮಹಮ್ಮದ್ ಮುಜಾಹಿದ್, ಲಿಯಾಕತ್ ಅಲಿ, ಶಾಶಿಧರ ಪಾಟೀಲ್, ಹಿತೇಂದ್ರ ಪಾಟೀಲ್, ಬಿ.ಎಚ್.ಉದಯಕುಮಾರ್, ಡಿ.ಶಿವಕುಮಾರ್,
ಕೆ.ಎಸ್.ಪ್ರವೀಣಕುಮಾರ್ ಮತ್ತಿತರರಿದ್ದರು.