ಹರಿಹರ : ಕೋವಿಡ್ -19 ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಜಿಲ್ಲಾ ನಗರ ಯೋಜನಾ ಆಯೋಗದ ನಿರ್ದೇಶಕರಾದ ಜಿ. ನಜ್ಮಾ ಆಶಯ
ಹರಿಹರ, ಜು. 13- ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವದಿಂದ ಮಾತ್ರ ಕೊರೊನಾ ರೋಗವನ್ನು ಮುಕ್ತ ಮಾಡುವುದಕ್ಕೆ ಸಾಧ್ಯವಿದೆ ಎಂದು ಜಿಲ್ಲಾ ನಗರ ಯೋಜನಾ ಆಯೋಗದ ನಿರ್ದೇಶಕರಾದ ಶ್ರೀಮತಿ ಜಿ. ನಜ್ಮಾ ಅಭಿಪ್ರಾಯಪಟ್ಟರು.
ನಗರದ ಬೆಂಕಿನಗರದ ನೂರಾನಿ ಆಟೋ ನಿಲ್ದಾಣದ ಬಳಿ ಇಂದು ಏರ್ಪಾಡಾಗಿದ್ದ ಕೋವಿಡ್ -19 ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಉತ್ತಮ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಬೇಕಾದರೆ ಒಂದು ಕೈಯಿಂದ ಚಪ್ಪಾಳೆ ತಟ್ಟಿದರೆ ಅದು ಸಾಧ್ಯವಿಲ್ಲ. ಎರಡೂ ಕೈಗಳಿಂದ ಚಪ್ಪಾಳೆ ತಟ್ಟಿದರೆ ಮಾತ್ರ ಅದು ಚಪ್ಪಾಳೆ ಶಬ್ದವು ಹೊರಗಡೆ ಬರುತ್ತದೆ. ಹಾಗೆ ಸಾರ್ವಜನಿಕರ ಮನಸ್ಸಿನಲ್ಲಿ ಮಾನವೀಯ ಗುಣಗಳು ಇರಬೇಕು. ಇಂತಹ ಸಂದರ್ಭಗಳಲ್ಲಿ ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳು ಅರಿತುಕೊಂಡ ಕೆಲಸ ಮಾಡುವುದಕ್ಕೆ ಮುಂದೆ ಬಂದರೆ ಮಾತ್ರ ಕೊರೊನಾ ಮುಕ್ತ ಮಾಡಬಹುದು ಎಂದು ಪ್ರತಿಪಾದಿಸಿದರು.
ಯಾವುದೇ ವ್ಯಕ್ತಿಗೆ ಕೊರೊನಾ ರೋಗದ ಲಕ್ಷಣಗಳು ಕಂಡುಬಂದರೆ ಅಂತಹ ವ್ಯಕ್ತಿಗೆ ಅವಮಾನ ಮಾಡದೆ ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಬೇಕು. ಕಾರಣ ಹಲವಾರು ರೋಗಗಳಿಗೆ ಔಷಧಿಯಿಂದ ಚಿಕಿತ್ಸೆ ನೀಡುವ ಬದಲಾಗಿ ಅವರಿಗೆ ನಾಲ್ಕು ಒಳ್ಳೆಯ ಮಾತುಗಳಲ್ಲಿ ಗುಣಪಡಿಸುವ ಶಕ್ತಿಯನ್ನು ಹೊಂದಿರುವುದನ್ನು ಕಂಡಿದ್ದೇವೆ. ಆದ್ದರಿಂದ ಒಂದು ಮನೆಗೆ ಬಂದ ರೋಗವನ್ನು ಮತ್ತೊಂದು ಮನೆಗಳಿಗೆ ಹರಡದಂತೆ ತಡೆಯಲು ಸರ್ಕಾರದ ಸಿಬ್ಬಂದಿಗಳು ಶ್ರಮಿಸಿದರೆ ಸಾಲದು. ಅದಕ್ಕೆ ವಾರ್ಡ್ ಮುಖಂಡರು ಜೊತೆಯಲ್ಲಿ ಸೇರಿಕೊಂಡು ಶ್ರಮಿಸಿದರೆ ಕೊರೊನಾ ಹೋಗಲಾಡಿಸಲು ಸಾಧ್ಯವಿದೆ ಎಂದು ನಜ್ಮಾ ಅವರು ತಿಳಿಸಿದರು.
ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ ಮಾತನಾಡಿ, ಕಂಟೈನ್ಮೆಂಟ್ ಝೋನ್ ಪ್ರದೇಶದಲ್ಲಿ ನೂರು ಮೀಟರ್ ನಲ್ಲಿ ಸಾರ್ವಜನಿಕರು ಹೊರಗಡೆ ಬರದಂತೆ ಎಚ್ಚರ ವಹಿಸಬೇಕು. ಆ ಸ್ಥಳದಲ್ಲಿ ವಾಸಿಸುವ ಜನರಿಗೆ ಅಗತ್ಯ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ತಲಪಿಸುವ ಕೆಲಸವನ್ನು ಮಾಡಬೇಕು. ಆ ಪ್ರದೇಶದಲ್ಲಿ ಇರುವ ಗರ್ಭಿಣಿ ಸ್ತ್ರೀಯರಿಗೆ, ಅರವತ್ತು ವರ್ಷದ ವೃದ್ಧರಿಗೆ ಸಕ್ಕರೆ ಕಾಯಿಲೆ, ಬಿ.ಪಿ. ಅಸ್ತಮಾ ಮುಂತಾದ ಯಾವುದೇ ಆರೋಗ್ಯದಲ್ಲಿ ತೊಂದರೆ ಬರದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಬಾಬುಲಾಲ್, ಡಾ. ನಿಸಾರುದ್ಧೀನ್ , ಮಹಮ್ಮದ್ ಅಲಿ, ಫಜುಲುಲ್ಲಾ, ಶಶಿನಾಯ್ಕ್, ಅಂಗನವಾಡಿ ಶಿಕ್ಷಕಿ, ಗೀತಾ, ಹೀನಾ ಕೌಸರ್, ಶ್ವೇತಾ, ಆಶಾ ಕಾರ್ಯಕರ್ತೆ ಪಾರ್ವತಿ, ಸಮಾಜ ಸೇವಕಿ ಜಯಮ್ಮ, ಸತ್ಯಶ್ರೀ, ನಿರ್ಮಲ, ನಗರಸಭೆ ಸಿಬ್ಬಂದಿ ವಸಂತ್ ಇತರರು ಹಾಜರಿದ್ದರು.