ಹರಪನಹಳ್ಳಿ, ಜು.12- ಕೋವಿಡ್ ಸೋಂಕು ಹೆಚ್ಚಳದ ನಡುವೆ ಆರೋಗ್ಯದ ದೃಷ್ಟಿಯಿಂದ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ವೃತ್ತ ನಿರೀಕ್ಷಕ ಕೆ.ಕುಮಾರ್, ಪಿಎಸ್ಐ ಪ್ರಕಾಶ್ ಅವರುಗಳು ಸಿವಿಲ್ ಡ್ರೆಸ್ನಲ್ಲಿ ಸೈಕಲ್ ಏರಿ ಪಟ್ಟಣದ ಪ್ರಮುಖ ಬೀದಿಗಳನ್ನು ಸುತ್ತಿ ಲಾಕ್ಡೌನ್ ಸ್ಥಿತಿ ಪರಿಶೀಲಿಸಿದರು.
ಕೋವಿಡ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡ ಭಾನುವಾರದ ಎರಡನೇ ಲಾಕ್ಡೌನ್ಗೆ ಪಟ್ಟಣದ ಜನತೆ ಸ್ಪಂದನೆ ನೀಡಿದ್ದಾರೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಸರ್ಕಾರಿ ಹಾಗೂ ಖಾಸಗಿ ವಾಹನಗಳು ರಸ್ತೆಗೆ ಇಳಿಯಲಿಲ್ಲ.
ಕೆಲವೊಂದು ಬೈಕ್ ಸವಾರರು ರಸ್ತೆಗಿಳಿದಾಗ ಪೊಲೀ ಸರು ಅಂತಹ ಬೈಕ್ಗಳನ್ನು ಸೀಜ್ ಮಾಡಿ, ಸಂಜೆ ದಂಡ ವಿಧಿಸಿ ಬಿಡುಗಡೆಗೊಳಿಸಿದರು. ಗ್ರಾಮೀಣ ಭಾಗದಿಂದ ಕೆಲವರು ಆಸ್ಪತ್ರೆಗಳಿಗೆ ಪಟ್ಟಣಕ್ಕೆ ಆಗಮಿಸಿದ್ದರು. ಹಾಲು, ವೈದ್ಯಕೀಯ ಸೇವೆ ಸೇರಿದಂತೆ ಅಗತ್ಯ ವಸ್ತುಗಳು ಹೊರತು ಪಡಿಸಿ, ಇತರೆ ಎಲ್ಲಾ ಅಂಗಡಿಗಳು ಮುಚ್ಚಿದ್ದವು.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಅವರು, ಹಿಂದಿನ ಭಾನುವಾರ ಬಳ್ಳಾರಿಯಲ್ಲಿ ಎಸ್ಪಿಯವರು ಸೈಕಲ್ ಮೇಲೆ ನಗರ ಸುತ್ತಾಡಿದ್ದರು. ಅವರ ಪ್ರೇರಣೆಯಿಂದ ನಾವೂ ಸಹ ಇಂದು ಸೈಕಲ್ ಏರಿ ಪಟ್ಟಣದ ಪರಿಸ್ಥಿತಿ ವೀಕ್ಷಿಸಿದೆವು. ಇದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು ಎಂದರು.