ಹೊನ್ನಾಳಿ, ಜು.12- ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಇಂದು ಕೊರೊನಾ ಪೀಡಿತರ ಮನೆಗಳನ್ನು ಸೀಲ್ಡೌನ್ ಮಾಡಲಾಯಿತು.
ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಖುದ್ದು ಕೊರೊನಾ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪಟ್ಟಣದ ಎ.ಕೆ.ಕಾಲೋನಿಯಲ್ಲಿ ಇಬ್ಬರಿಗೆ, ಅಕ್ಕಸಾಲಿಗರ ಬೀದಿಯಲ್ಲಿ ಒಬ್ಬರಿಗೆ, ಹೊಳೆಮಠ ಕಾಂಪೌಂಡ್ನ ಟಿ.ಎಂ.ರಸ್ತೆಯಲ್ಲಿ ಒಬ್ಬರಿಗೆ ಹಾಗೂ ತಾಲ್ಲೂಕಿನ ಬಿದರಗಡ್ಡೆ ಗ್ರಾಮದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದರೆ, ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ 2 ಮತ್ತು ತೆಗ್ಗಿಹಳ್ಳಿ ಗ್ರಾಮದಲ್ಲಿ 1 ಸೇರಿದಂತೆ ಒಟ್ಟು 8 ಪ್ರಕರಣಗಳು ವರದಿಯಾಗಿದ್ದು, ಎಲ್ಲಾ ಮನೆಗಳನ್ನು ಸೀಲ್ ಡೌನ್ ಮಾಡಿದರು.
ಹೊನ್ನಾಳಿಯಲ್ಲಿ 24 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ, ಅದರಲ್ಲಿ 16 ಪ್ರಕರಣಗಳು ಹೊನ್ನಾಳಿ ಪಟ್ಟಣದಲ್ಲೇ ಪತ್ತೆಯಾಗಿವೆ. ಅದೇ ರೀತಿ ನ್ಯಾಮತಿ ತಾಲ್ಲೂಕಿನಲ್ಲಿ 7 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಅವಳಿ ತಾಲೂಕಿನಲ್ಲಿ 17 ಕಂಟೈನ್ಮೆಂಟ್ ಝೋನ್ ಗಳನ್ನು ತೆರೆಯಲಾಗಿದೆ. ಸೀಲ್ಡೌನ್ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಎಂಪಿಆರ್, ಪರಿಸ್ಥಿತಿ ಅವಲೋಕಿಸಿದರಲ್ಲದೇ, ಜನರು ಎಚ್ಚರಿಕೆ ಯಿಂದ ಇರುವಂತೆ ಮನವಿ ಮಾಡಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದು, ಜನರು ಜಾಗರೂಕತೆ ಯಿಂದ ಇರುವಂತೆ ಮನವಿ ಮಾಡಿದರು. ಕೊರೊನಾ ಎಂದರೆ ಜನರು ಭಯ ಪಡುವುದು ಬೇಡ. ಅದನ್ನು ಆತ್ಮಸ್ಥೈರ್ಯದಿಂದ ಹೋಗಲಾಡಿಸಬೇಕೆಂದರಲ್ಲದೇ, ಕೊರೊನಾ ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಪಿಐ ದೇವರಾಜ್, ಪಿಎಸ್ಐ ತಿಪ್ಪೇಸ್ವಾಮಿ, ಪ.ಪಂ. ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ, ಆರೋಗ್ಯಾಧಿಕಾರಿ ನಾಗೇಶ್, ಕಂದಾಯಾಧಿಕಾರಿ ರಾಮಚಂದ್ರಪ್ಪ ಸೇರಿದಂತೆ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.