ರಾಣೇಬೆನ್ನೂರು : ಕಸದ ಗೂಡಾಗಿರುವ ಮದಗದ ಕೆರೆ

ರಾಣೇಬೆನ್ನೂರು, ಜು.10- ಮೈದುಂಬಿ ಹರಿಯುವಾಗ  ಜನಪ್ರತಿನಿಧಿಗಳು, ರಾಜಕಾರಣಿಗಳ (ಚುನಾವಣಾ ಗಿಮಿಕ್‌ಗಾಗಿ) ಜೊತೆಗೆ ಸ್ವಾಮೀಜಿಗಳಿಂದಲೂ ಪೂಜೆಗೊಳ್ಳುವ ಸಡಗರ ಸಂಭ್ರಮದಿಂದ ಬಾಗಿನ ಅರ್ಪಿಸುವಂತಹ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತವೆ. 

ಆದರೆ  ಒಡಲೊಳಗಿನ ನೀರು ಖಾಲಿಯಾದಾಗ ಅದೇ ನದಿಗಳು ಕಸ ಎಸೆಯುವ ತಿಪ್ಪೆಗಳಾಗುತ್ತವೆ. ರಟ್ಟಿಹಳ್ಳಿ ತಾಲ್ಲೂಕಿನ ಮದಗದ ಕೆರೆಯಿಂದ ಹುಟ್ಟುವ ಕುಮದ್ವತಿ ನದಿಯು ಮಳೆಗಾಲದಲ್ಲಿ ಮೈದುಂಬಿಕೊಳ್ಳುತ್ತದೆ. 

ಮದಗದಲ್ಲಿ ಹುಟ್ಟಿ ರಾಣೇಬೆನ್ನೂರು ತಾಲ್ಲೂಕಿನ ಮುದೇನೂರು ಮತ್ತು ಹೊಳೆಆನ್ವೇರಿ  ಮಧ್ಯದಲ್ಲಿ ತುಂಗಭದ್ರೆ ಸೇರಿಕೊಳ್ಳು ವವರೆಗೆ 2 ತಾಲ್ಲೂಕುಗಳ  30ಕ್ಕೂ ಅಧಿಕ ಗ್ರಾಮಗಳ ಸಾವಿರಾರು ಎಕರೆ  ಜಮೀನುಗಳಿಗೆ,  ಜನ ಜಾನುವಾರುಗಳಿಗೆ ನೀರುಣಿಸುತ್ತಿದೆ.

ಬೇಸಿಗೆ ಬರುವ ಮುನ್ನವೇ ಕೆರೆಯ ನೀರು ಕಡಿಮೆಯಾಗುತ್ತಿದ್ದಂತೆ ನದಿ ಬತ್ತತೊಡಗಿದಾಗ ನಮ್ಮಲ್ಲಿರುವ ಧಾರ್ಮಿಕ ಮನೋಭಾವವೂ ಬತ್ತುತ್ತದೆ. ದಡದಲ್ಲಿರುವ ಗ್ರಾಮಗಳ ಜನರಿಗೆ  ನದಿಯ ಒಡಲು ತಿಪ್ಪೆ ಗುಂಡಿಯಾಗಿ, ಚರಂಡಿ ನೀರು ಬಿಡಲು ರಾಜಕಾಲುವೆಯಾಗಿ ಮಾರ್ಪಾಡಾಗುತ್ತದೆ.  ಮಳೆ ಬಂದು ಮೈದುಂಬಿದ ನಂತರ ಇದೆಲ್ಲಾ ಹರಿದು ತುಂಗಭದ್ರೆಯ ಒಡಲು ಸೇರುತ್ತದೆ.

ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸರ್ಕಾರಗಳು ಈ ಬಗ್ಗೆ  ಕಠಿಣ ನಿಲುವಿನೊಂದಿಗೆ ಕ್ರಮಕೈಗೊಳ್ಳಬೇಕು. ಈ ಬಗ್ಗೆ  ಧಾರ್ಮಿಕ, ಸಾಮಾಜಿಕ ಚಿಂತನೆಯ ಜನಪ್ರತಿನಿಧಿಗಳು  ಸಹ ಇತ್ತ ದೃಷ್ಟಿ ಹರಿಸಬೇಕು. ತಪ್ಪೆಸಗುವವರ ವಿರುದ್ಧ  ಕ್ರಮ ಜರುಗಿಸಬೇಕು.

error: Content is protected !!