ಖಾಸಗಿ ಫೈನಾನ್ಸ್ ಸಂಸ್ಥೆಗಳಿಂದ ಸ್ವಸಹಾಯ ಸಂಘಗಳ ಸಭೆ: ಕೊರೊನಾ ವೈರಸ್ ಹರಡುವ ಭೀತಿ

ಜಗಳೂರು, ಜು.10- ತಾಲ್ಲೂಕಿನಾದ್ಯಂತ ಖಾಸಗಿ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಗಾಗಿ ಮಹಿಳಾ ಸ್ವಸಹಾಯ ಸಂಘಗಳ ಸಭೆಗಳನ್ನು ನಡೆಸುತ್ತಿರುವುದರಿಂದ ಇಲ್ಲಿ ಯಾವುದೇ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಸೇರಿದಂತೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದರಿಂದ ಕೊರೊನಾ ಹರಡುವ ಭೀತಿ ಇದೆ ಎಂದು ಇಂದು ನಡೆದ ತಾಲ್ಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ. ಸಿದ್ದೇಶ್ ಆತಂಕ ವ್ಯಕ್ತಪಡಿಸಿದರು. 

ತಾಲ್ಲೂಕಿನಾದ್ಯಂತ ಸ್ಪಂದನ, ಗ್ರಾಮೀಣ ಕೂಟ ಸೇರಿದಂತೆ ಹಲವಾರು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಗಳು ನೀಡಿರುವ ಸಾಲ ವಸೂಲಾತಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಸದಸ್ಯರು ಸಭೆ ಸೇರುತ್ತಿದ್ದಾರೆ. ಆದರೆ, ಇಲ್ಲಿ ಯಾವುದೇ ಸಾಮಾಜಿಕ ಅಂತರ ಇರುವುದಿಲ್ಲ. ಇದರಿಂದ ಕೊರೊನಾ ಹರಡುವ ಭೀತಿ ಇದೆ ಎಂದರು.

ಆರ್‌ಬಿ ನಿಯಮಾವಳಿ ಪ್ರಕಾರ ಆಗಸ್ಟ್ ತಿಂಗಳ ಕೊನೆಯವರೆಗೂ ಸಾಲ ವಸೂಲಾತಿಗೆ ಅವಕಾಶ ಇರುವುದಿಲ್ಲ. ಆದರೂ ಸಹ ಖಾಸಗಿ ಫೈನಾನ್ಸ್ ಕಂಪನಿಯವರು ಮಹಿಳೆಯರಿಗೆ ಸಾಲ ವಸೂಲಾತಿಗಾಗಿ ಸರಣಿ ಸಭೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ತಕ್ಷಣವೇ ತಾಲ್ಲೂಕು ವೈದ್ಯಾಧಿಕಾರಿಗಳು ಆಶಾ ಕಾರ್ಯಕರ್ತೆಯರ ಮೂಲಕ ಈ ಸಭೆಗಳು ನಡೆಸುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಲ್ಲಿ ಒತ್ತಾಯ ಪೂರ್ವಕವಾಗಿ ಸಾಲ ವಸೂಲಾತಿ ಮಾಡದಂತೆ ಕ್ರಮ ವಹಿಸಬೇಕು. ಈ ಬಗ್ಗೆ ತಹಶೀಲ್ದಾರ್‌ರಿಗೆ ಸೂಚನೆ ನೀಡಬೇಕೆಂದು ತಿಳಿಸಿದರು.

ಪ್ರಗತಿ ವರದಿ ನೀಡಿದ ತಾಲ್ಲೂಕು ವೈದ್ಯಾಧಿ ಕಾರಿ ಡಾ|| ನಾಗರಾಜ್ ಪಟ್ಟಣದಲ್ಲಿ ಇಂದು 4 ಪ್ರಕರಣಗಳು ವರದಿಯಾಗಿದ್ದು, ಆ ಪ್ರದೇಶದಲ್ಲಿ ಸೀಲ್‌ಡೌನ್ ಮಾಡಲಾಗಿದೆ. ನಾಲ್ಕು ಜನರನ್ನು ದಾವಣಗೆರೆ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಥಮ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗಂಟಲು ದ್ರವ ಪರೀಕ್ಷೆ ಒಳಪಡಿಸಲಾಗಿದ್ದು, ವರದಿ  ನಿರೀಕ್ಷೆಯಲ್ಲಿದ್ದೇವೆ. ಜಿಲ್ಲಾಧಿಕಾರಿಗಳ ಸೂಚನೆ ಅನ್ವಯ ತಾಲ್ಲೂಕಿನಲ್ಲಿ ಕೋವಿಡ್ ಆಸ್ಪತ್ರೆಯೊಂದನ್ನು ಸ್ಥಾಪಿಸಬೇಕಾಗಿದೆ ಎಂದು ತಿಳಿಸಿದರು. 

ಸಹಾಯಕ ಕೃಷಿ ಅಧಿಕಾರಿ ವೆಂಕಟೇಶ್‌ ಪ್ರಗತಿ ವರದಿ ನೀಡಿ, ತಾಲ್ಲೂಕಿನಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ 5000 ರೂ. ಸಹಾಯ ಧನವನ್ನು 15 ಸಾವಿರ ರೈತರಿಗೆ ನೀಡಲಾಗಿದೆ. ಉಳಿದಂತೆ ಇನ್ನೂ 17,000 ರೈತರು
ನೋಂದಣಿ ಮಾಡಿಕೊಂಡಿಲ್ಲ ಎಂದು ತಿಳಿಸಿದರು. 

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ವಿಮೆ ಪಾವತಿಸಲು ಇದೇ ತಿಂಗಳು 31 ರವರೆಗೂ ಅವಕಾಶ ಇದ್ದು, ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ರುದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್, ಗ್ರಾಮೀಣ ನೀರು ಸರಬರಾಜು, ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಹೇಮಾಜಿ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಮಹೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್‌ಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ನೀಡಿದರು. 

ಸಭೆಯ ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷ ರಾದ ಮಂಜುಳಮ್ಮ ವಹಿಸಿದ್ದರು. ಉಪಾಧ್ಯಕ್ಷ ಮಾದೇಗೌಡರ ಬಸವರಾಜಪ್ಪ, ಕಾರ್ಯನಿರ್ವಾ ಹಕ ಅಧಿಕಾರಿ ಮಲ್ಲಾನಾಯಕ ಉಪಸ್ಥಿತರಿದ್ದರು.

error: Content is protected !!