ದಾವಣಗೆರೆ, ಜು.9- ಕೊರೊನಾ ಹಿನ್ನೆಲೆ ಯಲ್ಲಿ ಬಾಕಿ ಇರುವ ಪರೀಕ್ಷೆ ನಡೆಸದೆ ಉತ್ತೀರ್ಣ ಮಾಡುವಂತೆ ಒತ್ತಾಯಿಸಿ ಎನ್‍ಎಸ್‍ಯುಐ ನೇತೃತ್ವದಲ್ಲಿ ಡಿಪ್ಲೋಮಾ, ಇಂಜಿನಿಯರಿಂಗ್, ಡಿಗ್ರಿ ಹಾಗೂ ವಿಟಿಯು ವಿದ್ಯಾರ್ಥಿಗಳು ನಗರದಲ್ಲಿ ಇಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪರೀಕ್ಷೆ ನಡೆಸಲು ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಪರೀಕ್ಷೆ ಬರೆಯಲು ಕೆಲ ವಿದ್ಯಾರ್ಥಿಗಳು ಹೊರ ರಾಜ್ಯಗಳ ಕಂಟೈನ್ಮೆಂಟ್ ವಲಯದಿಂದ ಬಂದು ಬರೆಯುವವರು ಇರುತ್ತಾರೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
6 ತಿಂಗಳಾದರೂ ಪಠ್ಯ ಪೂರ್ಣಗೊಳಿಸದ ಪ್ರಾಧ್ಯಾಪಕರು ಕೇವಲ 2 ತಿಂಗಳಲ್ಲಿ ಆನ್ ಲೈನ್ ಮೂಲಕ ಪಠ್ಯಗಳನ್ನು ಮುಗಿಸಿದ್ದೇವೆ ಎಂದು ಹೇಳುತ್ತಾ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಪಠ್ಯ ಅರ್ಥವಾಗದೆ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ಕಷ್ಟ ಹೇಳಿಕೊಳ್ಳಲಾಗದೆ ಪೇಚಾಡುತ್ತಿದ್ದಾರೆ ಎಂದು ಎನ್ ಎಸ್ ಯುಐ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಮುಜಾಹಿದ್ ಪಾಷ ತಿಳಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್, ಕಿಸಾನ್ ಕಾಂಗ್ರೆಸ್ ನ ಪ್ರವೀಣ್, ಸುರೇಶ್, ಹರೀಶ್, ವಿದ್ಯಾರ್ಥಿಗಳಾದ ಚಂದನ್, ಈಶ್ವರ್, ಕೊಟ್ರೇಶ್, ರಾಕೇಶ್, ಆದಿತ್ಯ, ಜಗದೀಶ್, ಅಮಿತ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.