ಹರಪನಹಳ್ಳಿ, ಜು.8- ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ಸಿದ್ಧತೆ ನಡೆದಿದೆ.
ಆಸ್ಪತ್ರೆಯ ಪ್ರವೇಶ ದ್ವಾರದ ಎಡ ಭಾಗದಿಂದ ಕ್ಯಾಂಟಿನ್ ಪಕ್ಕದ ದಾರಿಯಿಂದ ಕೋವಿಡ್ ಸೋಂಕಿತ ರೋಗಿಗಳನ್ನು ಕರೆದೊಯ್ಯಲಾಗುವುದು. ನಂತರ ಆ ಭಾಗದಲ್ಲಿ ಪ್ರತ್ಯೇಕವಾಗಿ 4 ಕೊಠಡಿಗಳಲ್ಲಿ 20 ಹಾಸಿಗೆಗಳನ್ನು ಸಿದ್ದ ಪಡಿಸಲಾಗಿದೆ.
ಇಲ್ಲಿ ಲಘು ರೋಗ ಲಕ್ಷಣಗಳಿಂದ ಕೋವಿಡ್ ಸೋಂಕಿತರಾದ ರೋಗಿಗಳ ದಾಖಲಾತಿ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಆಕ್ಷೇಪ – ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ದಾಖಲಾತಿ ಮಾಡಿ ಚಿಕಿತ್ಸೆ ನೀಡುವುದನ್ನು ಆಸ್ಪತ್ರೆ ಸುತ್ತ ಮುತ್ತಲ ನಿವಾಸಿಗಳು ಆಕ್ಷೇಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ತೆಲಿಗಿ ಟಿ. ಉಮಾಕಾಂತ್ ಹಾಗೂ ವಕೀಲ ನೀಲಗುಂದ ಬಿ. ವಾಗೀಶ್ ಅವರು ಈ ಆಸ್ಪತ್ರೆಗೆ ತಾಲ್ಲೂಕು ಹಾಗೂ ಹೊರ ತಾಲ್ಲೂಕುಗಳ ಗ್ರಾಮೀಣ ಭಾಗದ ಅನೇಕರು ವಿವಿಧ ರೋಗಗಳ ಚಿಕಿತ್ಸೆಗೆ ಆಗಮಿಸುತ್ತಾರೆ. ಹೆರಿಗೆಗಾಗಿ ಮಹಿಳೆಯರು ಬರುತ್ತಾರೆ, ಸೋಂಕು ತಗುಲಿದರೆ ಕಷ್ಟ. ಆದ್ದರಿಂದ ಈ ಸರ್ಕಾರಿ ಆಸ್ಪತ್ರೆ ಬಿಟ್ಟು ಹೊರ ವಲಯದ ಯಾವುದಾದರೂ ವಸತಿ ಹಾಸ್ಟೆಲ್ ಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಗುರುವಾರದಿಂದ ಚಿಕಿತ್ಸೆಗೆ ಕೋವಿಡ್ ರೋಗಿಗಳನ್ನು ದಾಖಲಾತಿ ಆರಂಭವಾಗು ತ್ತದೆ. ಯಾವುದೇ ರೋಗಲಕ್ಷಣಗಳು ಇಲ್ಲದೆ ಕೋವಿಡ್ ಸೋಂಕಿತರಾದ ರೋಗಿಗಳನ್ನು ಹರಿಹರ ರಸ್ತೆಯ ಅನಂತನಹಳ್ಳಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಬುಧವಾರ ಬೀದಿ ಬದಿ ವ್ಯಾಪಾರಿಗಳ ಗಂಟಲು ದ್ರವವನ್ನು ಹಳೆ ಆಸ್ಪತ್ರೆಯಲ್ಲಿ ಸಂಗ್ರಹಿಸುವ ಕಾರ್ಯ ನಡೆಯಿತು.