ಮಲೇಬೆನ್ನೂರು : ತುರ್ತು ಸಭೆಯಲ್ಲಿ ನಿರ್ಧಾರ
ಮಲೇಬೆನ್ನೂರು, ಜು. 8- ಮಾರಕ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದ ನಿರ್ದೇಶನದಂತೆ ಪಟ್ಟಣದ 23 ವಾರ್ಡ್‌ಗಳಲ್ಲಿ ಮತ್ತು 22 ಬೂತ್ ಗಳ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡುವ ಬಗ್ಗೆ ಬುಧವಾರ ಪುರಸಭೆಯಲ್ಲಿ ತುರ್ತು ಸಭೆ ನಡೆಸಲಾಯಿತು.
ವಾರ್ಡ್‌ನಲ್ಲಿರುವ ಜನಪ್ರತಿನಿಧಿಗಳು, ಸ್ವಯಂ ಸೇವಕರು, ನಾಗರಿಕರು ಮತ್ತು ವೈದ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬೂತ್ ಮಟ್ಟದ ಅಧಿಕಾರಿ, ಪೊಲೀಸರು, ದಾದಿಯರು, ಕಂದಾಯಾಧಿಕಾರಿ, ಕಂದಾಯ ನಿರೀಕ್ಷಕರು, ಇಂಜಿನಿಯರ್ ಇವರನ್ನು ಒಳಗೊಂಡ ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಮಿತಿಗೆ ನೋಡಲ್ ಅಧಿಕಾರಿಯಾಗಿ ಪುರಸಭೆ ಮುಖ್ಯಾಧಿಕಾರಿ ಮತ್ತು ಉಸ್ತುವಾರಿಗಳಾಗಿ ಉಪ ತಹಶೀ ಲ್ದಾರ್, ವೈದ್ಯಾಧಿಕಾರಿ, ಪಿಎಸ್ಐ ಕಾರ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ಟಾಸ್ಕ್‌ಫೋರ್ಸ್ ಸಮಿತಿಗೆ ವಾರ್ಡ್ ಪುರಸಭೆ ಸದಸ್ಯರೇ ಅಧ್ಯಕ್ಷರಾಗಿರುತ್ತಾರೆ. ಬೂತ್ ಮಟ್ಟದ ಸಮಿತಿಗೆ ಬಿಎಲ್ಓ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬೀಟ್ ಕಾನ್‌ಸ್ಟೇಬಲ್ ಮತ್ತು ಪುರಸಭೆಯ ಬಿಲ್ ಕಲೆಕ್ಟರ್ ಅಥವಾ ನೀರು ಸರಬರಾಜು ಸಹಾಯಕರನ್ನು ನೇಮಕ ಮಾಡಲಾಗುವುದೆಂದು ಪ್ರಾಸ್ತಾವಿಕ ಭಾಷಣದಲ್ಲಿ ಪರಿಸರ ಇಂಜಿನಿಯರ್ ಉಮೇಶ್ ಮಾಹಿತಿ ನೀಡಿದರು. ಈ ಸಮಿತಿಗಳಿಗೆ ಇದೇ ದಿನಾಂಕ 10,11ರಂದು ತರಬೇತಿ ನೀಡಲಾಗುವುದೆಂದರು.
ಜವಾಬ್ದಾರಿ : ವಾರ್ಡ್‌ಗಳಿಗೆ ಹೊರಗಿನಿಂದ ಯಾರೇ ಬಂದರೂ ಅಥವಾ ವಾರ್ಡ್‌ನಲ್ಲಿರುವ ವಯಸ್ಕರು, ಅನಾರೋಗ್ಯ ಪೀಡಿತರ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡುವ ಜವಾಬ್ದಾರಿ ಈ ಸಮಿತಿಗಳ ಮೇಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ತಿಳಿಸಿದರು.
ಉಪ ತಹಶೀಲ್ದಾರ್ ರವಿ ಮಾತನಾಡಿ, ಕೊರೊನಾ ವೈರಸ್‌ಗೆ ಲಸಿಕೆ ಸಿಗುವವರೆಗೂ ಎಲ್ಲರೂ ಯುದ್ಧ ಮಾದರಿಯಲ್ಲಿ ಹೋರಾಟ ಮಾಡೋಣ ಎಂದರು.
ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಮಾತನಾಡಿ, ಕೊರೊನಾ ಟೆಸ್ಟ್ ಸಾಮಾಗ್ರಿಗಳ ಕೊರತೆಯಿಂದಾಗಿ ಕೆಲವು ಸಂದರ್ಭದಲ್ಲಿ ಟೆಸ್ಟ್‌ಗೆ ಬಂದ ಜನರನ್ನು ವಾಪಸ್ ಕಳುಹಿಸಲಾಗಿದೆ ಎಂದು ಪುರಸಭೆ ಸದಸ್ಯ ಮಾಸಣಗಿ ಶೇಖರಪ್ಪ ಅವರ ದೂರಿಗೆ ಉತ್ತರಿಸಿದರು.
ಪುರಸಭೆ ಸದಸ್ಯರಾದ ಬಿ. ಸುರೇಶ್, ಮಹಾಂತೇಶ್ ಸ್ವಾಮಿ ಅವರು, ಲಾಕ್‌ಡೌನ್ ವೇಳೆ ಪಟ್ಟಣದಲ್ಲಿ ವೈನ್‌ಶಾಪ್‌ಗಳ ಓಪನ್‌ಗೆ ಅನುಮತಿ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ಇಲಾಖೆಯವರು ಲಾಕ್‌ಡೌನ್ ವೇಳೆ ಸಿಟಿ ರೌಂಡ್ಸ್ ಮಾಡುತ್ತಿಲ್ಲ ಎಂದು ದೂರಿದರು.
ಪುರಸಭೆ ಸದಸ್ಯರಾದ ಎ.ಆರೀಫ್ ಅಲಿ, ಮಹಾಲಿಂಗಪ್ಪ, ಸುಬ್ಬಿ ರಾಜಪ್ಪ, ಭೋವಿ ಕುಮಾರ್, ಫಕೃದ್ದೀನ್ ಅಹ್ಮದ್, ಆರೋಗ್ಯಾಧಿಕಾರಿ ಗುರುಪ್ರಸಾದ್, ದಿನಕರ್, ಗಣೇಶ್, ಪ್ರಭು ಮತ್ತಿತರರು ಭಾಗವಹಿಸಿದ್ದರು.