ದಾವಣಗೆರೆ, ಜು. 7 – ಕೊರೊನಾ ಸೋಂಕಿನ ಸಂಕಷ್ಟ ಸಮಾಜದ ಎಲ್ಲ ವಲಯಗಳನ್ನೂ ಹಿಂಡುತ್ತಾ, ಕೊನೆಗೆ ನ್ಯಾಯದಾನ ಮಾಡುವ ನ್ಯಾಯಾಂಗ ವಲಯವನ್ನೂ ಬಿಡದೇ ಕಾಡುತ್ತಿದೆ. ಕೊರೊನಾ ಕಾಟದಿಂದಾಗಿ ವಕೀಲರು ಹಾಗೂ ಕಕ್ಷಿದಾರರಿಬ್ಬರೂ ಹೈರಾಣಾಗುವ ಪರಿಸ್ಥಿತಿ ಎದುರಾಗಿದೆ.
ಮಾರ್ಚ್ ತಿಂಗಳಲ್ಲಿ ಆರಂಭವಾದ ಲಾಕ್ಡೌನ್ ನ್ಯಾಯಾಲಯಗಳ ಕಾರ್ಯ ನಿರ್ವಹಣೆಯನ್ನೂ ಬಂದ್ ಮಾಡಿತ್ತು. ನಂತರ ನ್ಯಾಯಾಲಯಗಳು ಕಾರ್ಯ ನಿರ್ವಹಣೆ ಆರಂಭಿಸಿವೆ ಯಾದರೂ, ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವುದು ಸಾಧ್ಯವಾಗುತ್ತಿಲ್ಲ.
ಇದು ವಕೀಲರು ಹಾಗೂ ಕಕ್ಷಿದಾರರಿಬ್ಬರ ಮೇಲೂ ಪರಿಣಾಮ ಬೀರುತ್ತಿದೆ. ಅತ್ತ ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ಸಿಗುತ್ತಿಲ್ಲ, ಇತ್ತ ಆದಾಯಕ್ಕಾಗಿ ವಕೀಲಿಕೆಯನ್ನೇ ನಂಬಿದ ವಕೀಲರು ಸಂಕಷ್ಟಕ್ಕೆ ಸಿಲುಕಿ ದ್ದಾರೆ. ತುರ್ತು ಪರಿಸ್ಥಿತಿಯ ಕಾಲದಲ್ಲೂ ಇರದ ನಿರ್ಬಂಧಗಳನ್ನು ಈಗ ವಕೀಲರು ಹಾಗೂ ಕಕ್ಷಿದಾರರು ಎದುರಿಸುವಂತಾಗಿದೆ.
ಜಿಲ್ಲಾ ಕೇಂದ್ರದಲ್ಲಿ 13 ನ್ಯಾಯಾಲಯಗಳಿವೆ. ಈ ಹಿಂದೆ ಪ್ರತಿ ನ್ಯಾಯಾಲಯದಲ್ಲೂ ಸುಮಾರು ನೂರು ಪ್ರಕರಣಗಳವರೆಗೆ ವಿಚಾರಣೆ ನಡೆಯುತ್ತಿತ್ತು. ಈಗ ಪ್ರತಿ ನ್ಯಾಯಾಲ ಯದಲ್ಲಿ ಒಂದು ಅವಧಿಗೆ ಹತ್ತು ಪ್ರಕರಣಗಳ ವಿಚಾರಣೆಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಅಲ್ಲದೇ, ವಾದ ಮಂಡನೆಯ ಹಂತದ ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ವಕೀಲರು ಹಾಗೂ ನ್ಯಾಯಾಧೀಶರಿಗೆ ಮಾತ್ರ ಹಾಜರಿರಲು ಅವಕಾಶ ನೀಡಲಾಗಿದೆ. ಕಕ್ಷಿದಾರರು ನ್ಯಾಯಾಲಯಕ್ಕೆ ಬರುವಂತಿಲ್ಲ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಆಗಸ್ಟ್ 6ರವರೆಗೆ ಇದೇ ಪದ್ಧತಿ ಮುಂದುವರೆಯಲಿದೆ ಎಂದು ಹೈಕೋರ್ಟ್ ತಿಳಿಸಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಹೊಸ ಮಾರ್ಗಸೂಚಿ ಕಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಹೊಸ ಪ್ರಕರ ಣಗಳನ್ನು ದಾಖಲಿಸಿಕೊಳ್ಳ ಲಾಗುತ್ತಿದೆ. ಅಪರಾಧಿಕ ಪ್ರಕರಣಗಳ ವಿಚಾರಣೆ, ಜಾಮೀನು ಇತ್ಯಾದಿಗಳ ಕುರಿತು ನಿರ್ಧಾರಗಳನ್ನೂ ತೆಗೆದುಕೊಳ್ಳಲಾ ಗುತ್ತಿದೆ. ಆದರೆ, ಮಾಸಾಶನ, ಅಪಘಾ ತದ ಸಂದರ್ಭದಲ್ಲಿ ಪರಿಹಾರ ಮುಂತಾದ ಪ್ರಕರಣಗಳು ಮೊದಲಿ ನಷ್ಟು ವೇಗವಾಗಿ ಸಾಗದೇ ಕಕ್ಷಿದಾರರಿಗೂ ಕಷ್ಟವಾಗುತ್ತಿದೆ.
ಹೆಂಡತಿ ಹಾಗೂ ಮಕ್ಕಳಿಗೆ ಜೀವನಾಂಶ ಕೊಡಬೇಕು ಎಂದು ಆದೇಶವಾಗಿದ್ದರೂ ಕೆಲವರು ಪಾಲಿಸುತ್ತಿಲ್ಲ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಜೀವನಾಂಶವನ್ನೇ ನಿಲ್ಲಿಸಿದ್ದಾರೆ. ಇದರಿಂದ ಮಹಿಳೆಯರಿಗೆ ಜೀವನ ನಡೆಸುವುದೇ ಕಷ್ಟವಾ ಗಿದೆ. ಈ ಸಂದರ್ಭದಲ್ಲಿ ಜೀವನಾಂಶದ ಆದೇಶ ಜಾರಿಯ ಪ್ರಕರಣಗಳನ್ನು ನ್ಯಾಯಾಲಯಗಳು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವ ಅಗತ್ಯವಿದೆ.
– ಎಲ್.ಹೆಚ್. ಅರುಣ್ ಕುಮಾರ್, ವಕೀಲರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು
ಕಕ್ಷಿದಾರರು ನ್ಯಾಯಾಲಯಕ್ಕೆ ಬರಲು ಹಾಗೂ ವಕೀಲರ ಒಕ್ಕೂಟಗಳು ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ನಾವು ನ್ಯಾಯಾಂಗದಲ್ಲಿ ಮನವಿ ಸಲ್ಲಿಸಿದ್ದೇವೆ. ಕಷ್ಟ ಎದುರಿಸುತ್ತಿರುವ ವಕೀಲರಿಗೆ ಸಂಘದಿಂದ ಸಾಧ್ಯವಾದಷ್ಟು ನೆರವು ನೀಡಿದ್ದೇವೆ.
– ಎನ್.ಟಿ. ಮಂಜುನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು
ಅಪಘಾತ ಪ್ರಕರಣಗಳಲ್ಲಿ ಜನರು ಮೊದಲೇ ದೈಹಿಕವಾಗಿ ಬಳಲಿರುತ್ತಾರೆ. ಅದರ ಜೊತೆಗೆ ಈಗ ವಿಳಂಬವಾದರೆ ಮಾನಸಿಕ ಸಮಸ್ಯೆಗೂ ಸಿಲುಕುತ್ತಾರೆ. ಕೊರೊನಾ ಲಾಕ್ಡೌನ್ ಕಾರಣದಿಂದ ಅತ್ತ ದುಡಿಮೆಯೂ ಇಲ್ಲ, ಇತ್ತ ಪರಿಹಾರವೂ ವಿಳಂಬವಾಗುತ್ತಿದೆ. ಕೊರೊನಾ ದುಪ್ಪಟ್ಟು ಸಮಸ್ಯೆ ತಂದಿದೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.
ಕಕ್ಷಿದಾರರ ವ್ಯಥೆ ಈ ರೀತಿಯಾದರೆ, ಅವರ ಕಷ್ಟ ಬಗೆಹರಿಸಬೇಕಿದ್ದ ವಕೀಲರು ತಾವೇ ಕಷ್ಟಕ್ಕೆ ಸಿಲುಕಿದ್ದಾರೆ. ಪೂರ್ಣ ಪ್ರಮಾಣದಲ್ಲಿ ವಿಚಾರಣೆಗಳು ಆರಂಭವಾಗದೇ ಆದಾಯ ಗಣನೀಯವಾಗಿ ಕಡಿಮೆಯಾಗಿದೆ. ವಿಚಾರಣೆಗೆ ಕಕ್ಷಿದಾರರ ಅಗತ್ಯವಿಲ್ಲದ ಕಾರಣ ಅವರೂ §ಸಾಮಾಜಿಕ ಅಂತರ’ ಕಾಯ್ದುಕೊಳ್ಳುತ್ತಿದ್ದಾರೆ. ಇದು ಆರ್ಥಿಕ ಅಂತರಕ್ಕೂ ಕಾರಣವಾಗುತ್ತಿದೆ!
ಒಂದೆರಡು ತಿಂಗಳಾದರೆ ಈ ಸಮಸ್ಯೆ ಹೆಚ್ಚು ಕಾಡುತ್ತಿರಲಿಲ್ಲ. ಆದರೆ, ನಾಲ್ಕು ತಿಂಗಳು ಉರುಳಿವೆ. ಇನ್ನೆಷ್ಟು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂಬುದೂ ಸ್ಪಷ್ಟವಾಗಿಲ್ಲ. ಹೀಗಾಗಿ ಕೆಲ ವಕೀಲರು ಜೀವನೋಪಾಯಕ್ಕಾಗಿ ಬೇರೆ ಉದ್ಯೋಗ ಗಳ ಮೊರೆ ಹೋಗುವ ಸಿದ್ಧತೆಯಲ್ಲೂ ಇದ್ದಾರೆ. ನ್ಯಾಯಾಲಯದಲ್ಲಿ ಸಾಮಾಜಿಕ ಅಂತರದ ನಿರ್ಬಂಧಗಳನ್ನು ಮುಂದುವರೆಸಲೇಬೇಕಿದೆ. ಆದರೆ, ಕನಿಷ್ಠ ಕಕ್ಷಿದಾರರು ಸೀಮಿತ ಪ್ರಕರಣಗಳಲ್ಲಾದರೂ ನ್ಯಾಯಾಲಯಕ್ಕೆ ಬರಲು ಅವಕಾಶ ಕೊಡಿ ಹಾಗೂ ವಕೀಲರ ಒಕ್ಕೂಟ ಕಾರ್ಯ ನಿರ್ವಹಣೆಗೆ ಅನುಮತಿ ನೀಡುವಂತೆ ಕೋರಿದ್ದೇವೆ ಎಂದು ಒಕ್ಕೂಟದ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ಕೊರೊನಾದೊಂದಿಗೆ ಜೀವನ ಕಟ್ಟಿಕೊಳ್ಳಬೇಕಿದೆ ಎಂದು ವಿಜ್ಞಾನಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲರೂ ಈಗಾಗಲೇ ತಿಳಿಸಿಯಾಗಿದೆ. ಜೀವನ ಕಟ್ಟಿಕೊಳ್ಳಲು ಮೂಲ ಆಧಾರವೇ ನ್ಯಾಯ. ಅಂತಹ ನ್ಯಾಯಕ್ಕಾಗಿ ಕೊರೊನಾ ಅವಧಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು ಅಗತ್ಯವಷ್ಟೇ ಅಲ್ಲದೇ ಅನಿವಾರ್ಯವೂ ಆಗಿದೆ. ಈ ದಿಸೆಯಲ್ಲಿ ತಂತ್ರಜ್ಞಾನದಿಂದ ಹಿಡಿದು ಮಾನವ ಶಕ್ತಿಯವರೆಗೆ ಸಮರ್ಪಕ ಬಳಕೆ ಸಾಧ್ಯತೆ ಬಗ್ಗೆ ಯೋಚಿಸುವ ಅನಿವಾರ್ಯತೆ ಎದುರಾಗಿದೆ.