ಮಲೇಬೆನ್ನೂರು : ಮಧ್ಯಾಹ್ನದ ಲಾಕ್‌ಡೌನ್ ಜಾರಿ

ಪಟ್ಟಣದಲ್ಲಿ ಈವರೆಗೆ 296 ಜನರಿಗೆ ಕೊರೊನಾ ಟೆಸ್ಟ್‌ 

ಮಲೇಬೆನ್ನೂರು, ಜು.7- ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಎಲ್ಲಾ ಕಡೆ ಹರಡುತ್ತಿರುವುದರಿಂದ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರ ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಮಲೇಬೆನ್ನೂರಿನಲ್ಲಿ ಮಂಗಳವಾರದಿಂದ ಮಧ್ಯಾಹ್ನ 2 ರಿಂದ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಪಟ್ಟಣದ ಎಲ್ಲಾ ವ್ಯಾಪಾರಿಗಳು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಲಾಕ್‌ಡೌನ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಎಲ್ಲಾ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಲಾಗಿದ್ದು, ಮಧ್ಯಾಹ್ನ 2 ರಿಂದ ಆಸ್ಪತ್ರೆ, ಮೆಡಿಕಲ್ ಷಾಪ್ ಹೊರತುಪಡಿಸಿ, ಉಳಿದೆಲ್ಲಾ ವ್ಯಾಪಾರಗಳನ್ನು ಬಂದ್ ಮಾಡುವಂತೆ ವ್ಯಾಪಾರಿಗಳಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಉಪತಹಶೀಲ್ದಾರ್ ರವಿ ತಿಳಿಸಿದ್ದಾರೆ.

ತಹಶೀಲ್ದಾರ್ ಅವರ ಮುಂದಿನ ಆದೇಶದವರೆಗೂ ಈ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಯಾರೂ ಗುಂಪಾಗಿ ಸೇರಿದಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

296 ಟೆಸ್ಟ್ : ಪಟ್ಟಣದಲ್ಲಿರುವ 50 ವರ್ಷ ಮೇಲ್ಪಟ್ಟವರು ಮತ್ತು ಐಎಲ್ಐ ಹಾಗೂ ಎಸ್‌ಎಆರ್ಐ ಲಕ್ಷಣಗಳಿರುವ ಪುರಸಭೆ, ನಾಡಕಚೇರಿ ಸಿಬ್ಬಂದಿ ಸೇರಿದಂತೆ ಇದುವರೆಗೂ ಒಟ್ಟು 296 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಈ ಕುರಿತು ಈವರೆಗೆ ಯಾರೊಬ್ಬರ ವರದಿಯು ಪಾಸಿಟಿವ್ ಬಂದಿಲ್ಲ ಎಂದು ಪುರಸಭೆಯ ಆರೋಗ್ಯಾಧಿಕಾರಿ ಗುರುಪ್ರಸಾದ್, ಪರಿಸರ ಇಂಜಿನಿಯರ್ ಉಮೇಶ್ ಮಾಹಿತಿ ನೀಡಿದರು.

ನಿಗಾ : ಪಟ್ಟಣಕ್ಕೆ ಬೆಂಗಳೂರಿನಿಂದ ಬರುವವರ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದ್ದು, ಈ ಕುರಿತು ಮಾಹಿತಿ ನೀಡುವಂತೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಏತನ್ಮಧ್ಯೆ ಬೀರಲಿಂಗೇಶ್ವರ ದೇವಸ್ಥಾನ ರಸ್ತೆಯಲ್ಲಿರುವ ಮನೆಗೆ ಬೆಂಗಳೂರಿನಿಂದ ನಾಲ್ವರು ಬಂದಿದ್ದು, ಅವರ ಆರೋಗ್ಯ ತಪಾಸಣೆ ಹಾಗೂ ಗಂಟಲು ದ್ರವ ಟೆಸ್ಟ್ ಮಾಡಿ, ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಸಭೆ : ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ಅತೀ ತುರ್ತಾಗಿ ಬೂತ್ ಹಾಗೂ ವಾರ್ಡ್‌ ಮಟ್ಟದ ಟಾಸ್ಕ್‌ ಫೋರ್ಸ್ ಸಮಿತಿಗಳನ್ನು ರಚಿಸುವ ಕುರಿತು ಚರ್ಚಿಸಲು ನಾಳೆ ಬುಧವಾರ ಬೆಳಿಗ್ಗೆ 10.30 ಕ್ಕೆ ಪುರಸಭೆ ಸಭಾಂಗಣದಲ್ಲಿ ಪುರಸಭೆ ಸದಸ್ಯರ, ವಿವಿಧ ಇಲಾಖೆಗಳ, ಅಧಿಕಾರಿಗಳ, ವೈದ್ಯರ ಸಭೆಯನ್ನು ಕರೆಯಲಾಗಿದೆ ಎಂದು ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ತಿಳಿಸಿದ್ದಾರೆ.

error: Content is protected !!