ಹರಿಹರ, ಜು.7- ಕೇಂದ್ರ ಸರ್ಕಾರ ಬಡವರಿಗೆ ಅನ್ಯಾಯ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.
ಕೇಂದ್ರ ಸರ್ಕಾರ ಅಡುಗೆ ಅನಿಲ, ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚು ಮಾಡುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯ ವೇಳೆ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರಿಗೆ ಮನವಿ ಅರ್ಪಿಸಿ ಅವರು ಮಾತನಾಡಿದರು.
ದಿನ ನಿತ್ಯ ಜನರು ಕೇಂದ್ರದ ಸರ್ಕಾರದ ಆಡಳಿತದ ವಿರುದ್ಧ ಶಪಿಸುತ್ತಿದ್ದಾರೆ. ಕೊರೊನಾದ ವಿಚಾರದಲ್ಲಿ ಲಂಚ ಪಡೆಯುತ್ತಿದ್ದಾರೆ ಎಂದರೆ, ಇವರ ಆಡಳಿತದ ಬಗ್ಗೆ ಜನರು ಅರಿತುಕೊಳ್ಳಬೇಕು. ಕೊರೊನಾ ರೋಗಿಗಳಿಗೆ ಹಾಸಿಗೆ, ಕುಡಿಯುವ ನೀರು, ಉತ್ತಮ ಚಿಕಿತ್ಸೆ, ಗುಣಮಟ್ಟದ ಆಹಾರ ಸೇರಿದಂತೆ ಯಾವುದೇ ಸರಿಯಾದ ಸೌಲಭ್ಯ ನೀಡುತ್ತಿಲ್ಲ. ಹತ್ತು ಸಾವಿರ ಹಣ ಖರ್ಚು ಮಾಡಿದರೆ, ಐವತ್ತು ಸಾವಿರ ಖರ್ಚು ಹಾಕಿ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ರಾಮಪ್ಪ ಕಿಡಿ ಕಾರಿದರು.
ಮಾಜಿ ಜಿ.ಪಂ ಸದಸ್ಯ ಎಂ.ನಾಗೇಂದ್ರಪ್ಪ ಮಾತನಾಡಿ ರೈತರ, ಕಾರ್ಮಿಕರ, ಸಣ್ಣ ವ್ಯಾಪಾರಸ್ಥರ ವ್ಯವಸ್ಥೆ ಬಗ್ಗೆ ಕಾಳಜಿ ತೋರಿಸಿದ ಬಿಜೆಪಿ ಸರ್ಕಾರ, ದಿನ ನಿತ್ಯ ಪೆಟ್ರೋಲ್ ದರವನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ ಮಾತನಾಡಿ, ಜನ ಸಾಮಾನ್ಯರು ದಿನ ನಿತ್ಯ ಜೀವನ ನಡೆಸುವುದು ಕಷ್ಟವಾಗಿರುವ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಐವತ್ತು ಪೈಸೆ, ಒಂದು ರೂಪಾಯಿ ಏರಿಸುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಕೋವಿಡ್ ವಿಚಾರದಲ್ಲಿ ಸಾವಿರಾರು ಕೋಟಿ ಲೂಟಿ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಅಭಿದಾಲಿ, ರೇವಣಸಿದ್ದಪ್ಪ ಅಮರಾವತಿ, ವಿರೂಪಾಕ್ಷಪ್ಪ, ಕೆ.ಜಡಿಯಪ್ಪ, ಗಂಗಾಧರ್ ಕೆ.ಪಿ. ಮಲೇಬೆನ್ನೂರು, ಭಾಗ್ಯದೇವಿ, ನೇತ್ರಾವತಿ ಪ್ಯಾಟಿ, ಪಾರ್ವತಿ, ಪರಶುರಾಮ ಕಾಟ್ವೆ, ತಿಪ್ಪೇಶ್, ವಿಜಯಕುಮಾರ್, ಎಸ್.ಬಿ.ಜಿ.ವಿ. ವೀರೇಶ್, ಮರಿದೇವಪ್ಪ, ಆನಂದ್, ಶಿವಪ್ಪ, ಆಸೀಫ್, ಫೈರೋಜ್ ಅಹಮ್ಮದ್, ನಗರಸಭೆ ಸದಸ್ಯರಾದ ಕೆ.ಜಿ.ಸಿದ್ದೇಶ್, ಮೆಹಬೂಬ್ ಬಾಷಾ ಇತರರು ಹಾಜರಿದ್ದರು.