ಅಭಿವೃದ್ಧಿ ಕೆಲಸಗಳಿಗೆ ಹಣ ನೀಡದೇ ಸತಾಯಿಸುತ್ತಿರುವ ಜಿಪಂ ಸಿಇಒ

ಮತ್ತಿಹಳ್ಳಿ ಗ್ರಾ.ಪಂ. ಸದಸ್ಯರಿಂದ ಉಪವಾಸ ಸತ್ಯಾಗ್ರಹ

ಹರಪನಹಳ್ಳಿ, ಜು.7- ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಪಟ್ಟ ಹಣ ನೀಡದೇ ಸತಾಯಿಸುತ್ತಿ ರುವ ಜಿ.ಪಂ ಸಿಇಒ ಅವರ ಕ್ರಮ ಖಂಡಿಸಿ, ಗ್ರಾ.ಪಂ ನಿಕಟ ಪೂರ್ವ ಅಧ್ಯಕ್ಷರಾದ ಚೆನ್ನಮ್ಮ ರಾಮಣ್ಣ ಮತ್ತು ಸದಸ್ಯರು, ಗ್ರಾ.ಪಂ ಎದುರು ಉಪವಾಸ ಸತ್ಯಾಗ್ರಹ ಕೈಗೊಂಡ ಘಟನೆ ಹರಪನಹಳ್ಳಿಯ ಮತ್ತಿಹಳ್ಳಿಯಲ್ಲಿ ಇಂದು ಜರುಗಿದೆ.

ಕಳೆದ ಮಾರ್ಚ್ 23  ರಂದು ಲಾಕ್‌ಡೌನ್ ಸಂದರ್ಭದಲ್ಲಿ ಪಂಚಾಯ್ತಿ ಆರ್ಥಿಕ ಸ್ಥಿತಿ ಕಷ್ಟವಾದಾಗ ಸಾಲ ಮಾಡಿ, ಪಂಚಾಯ್ತಿಯ ವಿವಿಧ ಹಳ್ಳಿಗಳಲ್ಲಿ ಸ್ವಚ್ಛತೆ, ಫಾಗಿಂಗ್, ಅಗ್ನಿಶಾಮಕ ವಾಹನದಿಂದ ರಾಸಾಯನಿಕ ಸಿಂಪರಣೆ, ಬೀದಿ ದೀಪ ಅಳವಡಿಕೆ ಹೀಗೆ ಅಧ್ಯಕ್ಷರು, ಸದಸ್ಯರು ಸೇರಿ ಅಂದಾಜು 15 ಲಕ್ಷ ರೂ.ಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಸಲಾಗಿದೆ.

ಈ ಸಂದರ್ಭದಲ್ಲಿಯೇ 14ನೇ ಹಣಕಾಸು ಯೋಜನೆಯಲ್ಲಿ 24 ಲಕ್ಷ ರೂ. ಮಂಜೂರಾಯಿತು. ಆ ಮಂಜೂರಾದ ಹಣಕ್ಕೆ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆದ ಮೇಲೆ ತಿಳಿಸಿದ ಕೆಲಸಗಳನ್ನು ಆ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿತ್ತು.

ನಂತರ  ಹಣ ಬಿಡುಗಡೆ ಮಾಡಿ ಎಂದು 2-3 ಬಾರಿ ಹೋಗಿ ಬಳ್ಳಾರಿ ಜಿ.ಪಂ ಮುಖ್ಯ ಕಾರ್ಯನಿರ್ವಾ  ಹಕ ಅಧಿಕಾರಿಯವರನ್ನು ಕೋರಿದಾಗ, ನಮಗಿಂತ  ಹಿಂದೆ ಇದ್ದ ಅಧ್ಯಕ್ಷರ ಅವಧಿಯಲ್ಲಿ ಅಕ್ರಮವಾಗಿದೆ. ಆದ್ದರಿಂದ ತಮ್ಮ ಅವಧಿಯಲ್ಲಿ ಕೈಗೊಂಡ ಕೆಲಸಗಳ ಪರಿಶೀಲನೆ ಮಾಡಿಸುತ್ತೇನೆ ಎಂದು ತಂಡ ಕಳುಹಿಸಿ, ಪರಿಶೀಲನೆ ಮಾಡಿಸಿದ ನಂತರವೂ ಈವರೆಗೂ ಹಣ ಬಿಡುಗಡೆ ಮಾಡಿಲ್ಲ ಎಂದು ಚೆನ್ನಮ್ಮ ಆರೋಪಿಸುತ್ತಾರೆ.

ಆದ್ದರಿಂದ ಸಾಲ ಮಾಡಿ ಅಭಿವೃದ್ಧಿ ಕೆಲಸ ಮಾಡಿಸಿದ್ದೇವೆ. ಸಾಲ ತೀರಿಸುವುದು ಹೇಗೆ ಎಂಬ ಪ್ರಶ್ನೆ ಉಂಟಾಗಿದೆ. ಇದೀಗ ನಮ್ಮ ಅವಧಿಯೂ ಪೂರ್ಣ ಗೊಂಡಿದೆ. ಮಾಡಿದ ಕೆಲಸದ ಹಣ ಸಹ ಬರುತ್ತಾ ಇಲ್ಲ ಎಂದು ಅವರು ದುಃಖ ತೋಡಿಕೊಂಡರು.

ಜಿ.ಪಂ ಸಿಇಒ ಹಣ ಬಿಡುಗಡೆ ಮಾಡುವವರೆಗೂ ಸದಸ್ಯರು ಮತ್ತು ನಾನು ಜೊತೆಗೆ ನನ್ನ ಪತಿ ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇವೆ. ಇದಕ್ಕೆಲ್ಲಾ ಕಾರಣ ಜಿ.ಪಂ ಸಿಇಒ ಎಂದು ಅವರು ದೂರಿದರು.

ತಾ.ಪಂ. ಇಒ ಅನಂತರಾಜು ಭೇಟಿ ನೀಡಿ, ಸತ್ಯಾಗ್ರಹ ವಾಪಾಸ್ ಪಡೆಯುವಂತೆ ಮನವಿ ಮಾಡಿದರೂ ಸಹ ಪ್ರತಿಭಟನಾಕಾರರು ಹಣ ನೀಡದೆ ವಾಪಸ್ಸಿಲ್ಲ ಎಂದು ಉತ್ತರಿಸಿದ್ದಾರೆ.

ಗ್ರಾ.ಪಂ ಸದಸ್ಯರುಗಳಾದ ಸಿದ್ದಮ್ಮ, ಶೈಲಜಾ, ಮಂಜುಳಾ, ಚೆನ್ನಬಸಪ್ಪ ಮುಖಂಡರಾದ ಬೆಟ್ಟನಗೌಡ, ಒ.ಸಿದ್ದಪ್ಪ, ದೇವರಾಜ್‌, ಮನೋಹರ್‌, ಶಾಂತ್‌ ಕುಮಾರ್‌, ಪ್ರದೀಪ್‌, ಅನಿತಾ, ಲಂಕೇಶ್‌, ಪ್ರಭು ಮತ್ತು ಇತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

error: Content is protected !!