ಹರಪನಹಳ್ಳಿ, ಜು.7- ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಸಾರ್ವಜನಿಕರು ಸ್ವಯಂ ಲಾಕ್ ಡೌನ್ ವಿಧಿಸಿಕೊಂಡಿದ್ದಾರೆ.
ಮೊದಲು ತೋರಣಗಲ್ ಕಂಟೈನ್ ಮೆಂಟ್ ಜೋನ್ ನಲ್ಲಿ ಕರ್ತವ್ಯ ನಿರ್ವಹಿಸಿ ಆಗಮಿಸಿದ ಮುಖ್ಯ ಪೇದೆಗೆ ಕೊರೋನಾ ಸೋಂಕು ದೃಢವಾಗಿತ್ತು, ನಂತರ ಇವರ ಸಂಪರ್ಕಕ್ಕೆ ಬಂದ ಇಬ್ಬರಿಗೂ ಸೋಂಕು ಕಾಣಿಸಿಕೊಂಡಿತ್ತು. ಮತ್ತೆ ಜನರಲ್ ಸ್ಟೋರ್‌ನ ಮಾವ, ಅಳಿಯನಿಗೂ ಸೋಂಕು ಕಾಣಿಸಿಕೊಂಡು ಒಟ್ಟು 5 ಜನರಿಗೆ ಹೋಬಳಿ ಕೇಂದ್ರವಾಗಿರುವ ಅರಸೀಕೆರೆಯಲ್ಲಿ ಕೋವಿಡ್ ಸೋಂಕು ತಗುಲಿದೆ.
ಇಲ್ಲಿಯ ಅನೇಕರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ, 1 ನೇ ವಾರ್ಡ್ ಮುಸ್ಲಿಂ ಓಣಿಯನ್ನು ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ಜನರು ಸ್ವಯಂ ಪ್ರೇರಿತರಾಗಿ ಗ್ರಾಮವನ್ನು ಲಾಕ್ ಡೌನ್ ಗೆ ಒಳಪಡಿಸಿಕೊಂಡರು.
ಸೋಮವಾರ ಬೆಳಿಗ್ಗೆ ಮಾತ್ರ ಸ್ವಲ್ಪ ಹೊತ್ತು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ, ಖರೀದಿ ನಡೆಯಿತು. ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟವು. ಭಾನುವಾರ ಪತ್ತೆಯಾದ ಸೋಂಕಿತರ ನಿವಾಸಕ್ಕೆ ಭೇಟಿ ನೀಡಿದ ಆರೋಗ್ಯ ಸಿಬ್ಬಂದಿ ಕೆಲವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದರು.