3 ದಿನಗಳಲ್ಲಿ 3 ಅಡಿ ನೀರು
ಶಿವಮೊಗ್ಗ, ಜು.6- ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ 4-5 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಜಲಾಶಯಕ್ಕೆ ಬರುವ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಳವಾಗಿದೆ.
ಜುಲೈ 2 ರ ಗುರುವಾರ 856 ಕ್ಯೂಸೆಕ್ಸ್ ಇದ್ದ ನೀರಿನ ಒಳ ಹರಿವು, ಶುಕ್ರವಾರ 2118, ಶನಿವಾರ 4769, ಭಾನುವಾರ 5487, ಸೋಮವಾರ 7918 ಕ್ಯೂಸೆಕ್ಸ್ಗೆ ಏರಿಕೆ ಕಂಡಿದೆ. ಇದರಿಂದಾಗಿ ಜಲಾಶಯದ ನೀರಿನಮಟ್ಟ ಸೋಮವಾರ ಸಂಜೆ 142 ಅಡಿ ದಾಟಿದೆ.
ಕಳೆದ ವರ್ಷದ ಈ ದಿನ ಜಲಾಶಯದಲ್ಲಿ 125 ಅಡಿ 8 ಇಂಚು ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಜಲಾಶಯದಲ್ಲೀಗ 16 ಅಡಿ ನೀರು ಹೆಚ್ಚಿದ್ದು, 28.189 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಗರಿಷ್ಟ ಮಟ್ಟ 186 ಅಡಿ ಆಗಿದ್ದು, ಜಲಾಶಯ ಭರ್ತಿಯಾಗಲು ಇನ್ನೂ 44 ಅಡಿ ನೀರು ಬೇಕು.
71.535 ಟಿಎಂಸಿ ನೀರು ಸಾಮರ್ಥ್ಯದ ಜಲಾಶಯಕ್ಕೆ ಇನ್ನೂ 43 ಟಿಎಂಸಿ ನೀರು ಹರಿದು ಬರಬೇಕಿದೆ.ವಾಡಿಕೆ ಪ್ರಕಾರ ಜಲಾಶಯವು ಆಗಸ್ಟ್ ತಿಂಗಳಲ್ಲೇ ಹೆಚ್ಚು ಭರ್ತಿಯಾಗಿರುವ ಕಾರಣ ಈ ವರ್ಷವೂ ಮಳೆ ಸಮೃದ್ಧಿಯಾಗಿ ಬಂದರೆ ಆಗಸ್ಟ್ನಲ್ಲಿ ಡ್ಯಾಂ ಭರ್ತಿಯಾಗುವ ವಿಶ್ವಾಸದಲ್ಲಿ ಅಚ್ಚುಕಟ್ಟಿನ ರೈತರಿದ್ದಾರೆ.
ಜಲಾಶಯಕ್ಕೆ ಈಗ ಬರುತ್ತಿರುವ ನೀರಿನ ಒಳಹರಿವು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದ್ದು, ಮಳೆ ಪ್ರಮಾಣವನ್ನು ಅವಲಂಬಿಸಿದೆ. ಕಳೆದ ವರ್ಷ ಸುರಿದ ಮಹಾಮಳೆಯಿಂದಾಗಿ ಅತಿವೃಷ್ಠಿಯಾಗಿ ನಾಡಿನ ಎಲ್ಲಾ ಜಲಾಶಯಗಳು ಒಂದೇ ವಾರದಲ್ಲಿ ತುಂಬಿ ಹರಿದಿದ್ದವು. ಈ ವರ್ಷ ಅತಿವೃಷ್ಠಿಯಾಗದಂತೆ ರೈತರನ್ನು ಸಮೃದ್ಧಿಗೊಳಿಸುವಷ್ಟು ಮಳೆ ಸುರಿಸು ಎಂದು ರೈತರು ಮಳೆ ದೇವನಲ್ಲಿ ಪ್ರಾರ್ಥಿಸುತ್ತಿದ್ದಾರೆ.
ನಾಟಿಗೆ ಸಿದ್ದತೆ : ಈಗಾಗಲೇ ಸಸಿ ಮಡಿ ಬೆಳೆಸಿಕೊಂಡಿರುವ ತುಂಗಭದ್ರಾ ನದಿ ಪಾತ್ರದ ರೈತರು ಮತ್ತು ದೇವರಬೆಳಕೆರೆ ಪಿಕಪ್ ಸುತ್ತಮುತ್ತಲಿನ ರೈತರು ಮಳೆಗಾಲದ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನೀರು ಹೆಚ್ಚಳ : ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ತುಂಗಾ ನದಿಗೆ ಬಿಟ್ಟಿರುವುದರಿಂದ ನಂದಿಗುಡಿ ಸಮೀಪ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ 22 ಕೆರೆಗಳಿಗೆ ನೀರು ಪೂರೈಸಲು ಅನುಕೂಲವಾಗಿದೆ.