ದಾವಣಗೆರೆ, ಜು.6- ರಾಜ್ಯದ ಇತಿಹಾಸ ಪಠ್ಯ ಪುಸ್ತಕಗಳ ಕನ್ನಡೀಕರಣಕ್ಕೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕ ದಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಜಿಲ್ಲಾಧ್ಯಕ್ಷ ಕೆ.ಎನ್. ವೆಂಕಟೇಶ್ ನೇತೃತ್ವದಲ್ಲಿ ಜಮಾಯಿಸಿದ್ದ ಸಂಘ ಟನೆ ಕಾರ್ಯಕರ್ತರು, ಕರ್ನಾಟಕ ಏಕೀಕರಣ ವಾಗಿ 75 ವರ್ಷಗಳೇ ಕಳೆಯುತ್ತಾ ಬಂದರೂ ರಾಜ್ಯದ ಇತಿಹಾಸದ ಪಠ್ಯ ಪುಸ್ತಕಗಳು ಕನ್ನಡೀಕ ರಣವಾಗದೇ ಇರುವುದು ಸರಿಯಲ್ಲ ಎಂದು ತೀವ್ರವಾಗಿ ಖಂಡಿಸಿದರು. ನಂತರ ಉಪವಿಭಾ ಗಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರ ವಣಿಗೆ ನಡೆಸಿ ಉಪವಿಭಾಗಾಧಿಕಾರಿ ಮುಖಾಂ ತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ರಾಜ್ಯವನ್ನಾಳಿದ ರಾಜ ಮನೆತನಗಳು, ರಾಜರು, ಇತಿಹಾಸ ಪುರುಷರು, ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣಕ್ಕಾಗಿ ದುಡಿದ ಮಹನೀಯರು, ಕಲೆ, ಸಾಹಿತ್ಯ, ವಾಸ್ತುಶಿಲ್ಪದ ಜನ ಕರು, ಸಾಹಿತಿ, ಚಿಂತಕರು ಸೇರಿದಂತೆ ನಾಡನ್ನು ಕಟ್ಟಿದ ರಣಧೀರ, ರಣವೀರರ ಇತಿಹಾಸ ನಮ್ಮ ನಾಡಿನ ಮಕ್ಕಳಿಗೆ ಬೋಧಿಸದೇ ಸರ್ಕಾರ ನಾಡ ದ್ರೋಹದ ಪಠ್ಯ ಪುಸ್ತಕಗಳನ್ನು ರಚಿಸಿ ಕರ್ನಾಟಕದ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಧಿಕಾರಕ್ಕೆ ಬರುವ ಸರ್ಕಾರಗಳು ತಮಗೆ ಬೇಕಾದ ಹಾಗೆ ಪಠ್ಯ ಪುಸ್ತಕಗಳ ಬದಲಾವಣೆ ಮಾಡಿಕೊಂಡು ಅವರ ಪಕ್ಷದ ಸಿದ್ದಾಂತ ಒಪ್ಪುವ ವ್ಯಕ್ತಿಗಳನ್ನು ಹೆಸರು ಪಠ್ಯಪುಸ್ತಕಗಳಲ್ಲಿ ಸೇರಿಸುವ ವ್ಯವಸ್ಥಿತ ಕೆಲಸ ಎಲ್ಲಾ ಕಾಲದಿಂದಲೂ ನಡೆಯುತ್ತಾ ಬಂದಿದೆ. ಕರ್ನಾಟಕದ ಮಕ್ಕಳಿಗೆ ಕರ್ನಾಟಕ ರಾಜ್ಯದ ಉದಯದ ಇತಿಹಾಸವೇ ಗೊತ್ತಿಲ್ಲ. ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರು ರಾಜಕೀಯ ಪಕ್ಷಗಳ ಏಜೆಂಟರ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ದುರ್ದೈವ ಎಂದು ದೂರಿದರು.
ಪ್ರತಿಭಟನೆಯಲ್ಲಿ ಅಯಾಜ್ ಖಾನ್, ಅಲ್ಲಾಭಕ್ಷಿ, ಜಿ.ಮಂಜುನಾಥ್, ಕೆಂಚಪ್ಪ, ಕುಮಾರ್, ಹರೀಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.