ಹರಿಹರ, ಜು.6- ನಗರದ ಎ.ಕೆ.ಕಾಲೋನಿ, ಶಿವಮೊಗ್ಗ ರಸ್ತೆ, ಅಗಸರ ಬಡಾವಣೆಯ ಪ್ರದೇಶದಲ್ಲಿ ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಳೆದ 14 ದಿನಗಳ ಹಿಂದೆ ಮಾಡಲಾಗಿದ್ದ ಸೀಲ್ಡೌನನ್ನು ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ನಿನ್ನೆ ತಾಲ್ಲೂಕು ಆಡಳಿತ ತೆರವು ಗೊಳಿಸಿದೆ.
ಎರಡು ವಾರಗಳಿಂದ ಅಲ್ಲಿನ ನಿವಾಸಿಗಳಲ್ಲಿ ಮನೆ ಮಾಡಿದ್ದ ಆತಂಕಕ್ಕೆ ಇಂದು ತೆರೆ ಬಿದ್ದಿದೆ. ದುಗುಡ, ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದ ಜನತೆ ಈಗ ತೆರವುಗೊಳಿಸಿದ ಪರಿಣಾಮವಾಗಿ ನಿರಾಳರಾಗಿದ್ದಾರೆ.
ನಗರಸಭಾ ಸದಸ್ಯ ಪಿ.ಎನ್.ವಿರೂಪಾಕ್ಷ ಮಾತನಾಡಿ, ಎ.ಕೆ. ಕಾಲೋನಿಯಲ್ಲಿ ಪತ್ತೆಯಾಗಿದ್ದ ಕೋವಿಡ್-19 ಪ್ರಕರಣ ಹರಿಹರಕ್ಕೆ ಸಂಬಂಧಿಸಿದ್ದಲ್ಲ. ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಪತ್ನಿಯಿಂದ ಬಂದಿದ್ದ ಪ್ರಕರಣವಾಗಿದ್ದು, ನಮ್ಮ ಕಾಲೋನಿಗೆ ಇದು ಸಂಬಂಧಿಸಿದ್ದಲ್ಲ ಎಂದು ಹೇಳಿದ ಅವರು, ಆದಾಗ್ಯೂ ಕಳೆದ ಎರಡು ವಾರಗಳಿಂದ ಸೀಲ್ ಡೌನ್ ಮಾಡಿದ್ದ ತಾಲ್ಲೂಕು ಆಡಳಿತದವರು ಇಲ್ಲಿಯವರೆಗೆ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತೆರವು ಗೊಳಿಸಿರುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.